ರೈಲು ದುರಂತಕ್ಕೆ ಕಾರಣ ಏನು? ಪ್ರಾಥಮಿಕ ತನಿಖೆಯ ವರದಿಯಲ್ಲಿ ಏನಿದೆ ಗೊತ್ತಾ?
Saturday, June 3, 2023
ನವದೆಹಲಿ: ಒರಿಸ್ಸಾದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರೈಲು ದುರಂತಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಯ ಮಾಹಿತಿ ಹೊರಬಿದ್ದಿದೆ.
ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಮುಖ್ಯ ಮಾರ್ಗದ ಬದಲಿಗೆ ಲೂಪ್ ಲೈನ್‌ಗೆ ಪ್ರವೇಶಿಸಿ ಬಹಾನಗರ್ ಬಜಾರ್ ನಿಲ್ದಾಣದ ಮುಂದೆ ನಿಲ್ಲಿಸಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದ್ದು, ಈ ಕೋರಮಂಡಲ್ ಎಕ್ಸ್‌ಪ್ರೆಸ್ ಬೋಗಿಗಳು ಚದುರಿ ಪಕ್ಕದ ಹಳಿ ಮೇಲೆ ಬಿದ್ದಿವೆ. ಆ ಬೋಗಿಗಳಿಗೆ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದ ಕಾರಣ ಮಗುಚಿ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕೋರಮಂಡಲ್ ಎಕ್ಸ್‌ಪ್ರೆಸ್ ಗಂಟೆಗೆ 128 ಕಿ. ಮೀ ವೇಗದಲ್ಲಿತ್ತು. ಬೆಂಗಳೂರು - ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಗಂಟೆಗೆ 116 ಕಿ.ಮೀ ವೇಗದಲ್ಲಿತ್ತು. ಎರಡು ರೈಲುಗಳು ಸುಮಾರು ಎರಡು ಸಾವಿರ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದವು. ಈ ಪ್ರಾಥಮಿಕ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾರ್ಯಾಚರಣೆಯನ್ನು ಸುಲಭಗೊಳಿಸಲು ಮತ್ತು ಹೆಚ್ಚಿನ ರೈಲುಗಳಿಗೆ ಅವಕಾಶ ಕಲ್ಪಿಸಲು ಭಾರತೀಯ ರೈಲ್ವೆಯ ಲೂಪ್ ಲೈನ್‌ಗಳನ್ನು ನಿಲ್ದಾಣದ ಪ್ರದೇಶದಲ್ಲಿ ನಿರ್ಮಿಸಿತ್ತು. ಈ ಲೂಪ್ ಲೈನ್‌ಗಳು ಸಾಮಾನ್ಯವಾಗಿ 750 ಮೀಟರ್ ಉದ್ದ ಇರುತ್ತವೆ. ಬಹು ಇಂಜಿನ್‌ಗಳೊಂದಿಗೆ ಉದ್ದದ ಸರಕು ರೈಲುಗಳಿಗೆ ಅವಕಾಶವನ್ನು ಕಲ್ಪಿಸುತ್ತವೆ.
ಘಟನೆಯ ಪ್ರತ್ಯಕ್ಷದರ್ಶಿ ಅನುಭವ್ ದಾಸ್ ಪ್ರಕಾರ, ಸ್ಥಳೀಯ ಅಧಿಕಾರಿಗಳು ಮತ್ತು ರೈಲ್ವೆ ಅಧಿಕಾರಿಗಳು ಆರಂಭದಲ್ಲಿ ತಾನು ಪ್ರಯಾಣಿಸುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದರು.
ಆದರೆ, ಈ ಬಗ್ಗೆ ರೈಲ್ವೆ ಇಲಾಖೆಯು ಅಧಿಕೃತವಾಗಿ ದೃಢಪಡಿಸಿಲ್ಲ. ಕೂಲಂಕಷವಾಗಿ ತನಿಖೆ ನಡೆಯುತ್ತಿದ್ದರೂ ಇದುವರೆಗೆ ಯಾವುದೇ ರೈಲ್ವೆ ಅಧಿಕಾರಿಗಳು ಈ ಬಗ್ಗೆ ಮಾತನಾಡಿಲ್ಲ.
ಈ ಭೀಕರ ರೈಲು ಅಪಘಾತದ ಕುರಿತು ರಾಷ್ಟ್ರೀಯ ಸಾರಿಗೆ ಸಂಸ್ಥೆಯು ಉನ್ನತ ಮಟ್ಟದ ತನಿಖೆಯನ್ನು ಆರಂಭಿಸಿದೆ. ಇದರ ನೇತೃತ್ವವನ್ನು ಆಗ್ನೇಯ ವೃತ್ತದ ರೈಲ್ವೆ ಸುರಕ್ಷತಾ ಆಯುಕ್ತ AM ಚೌಧರಿ ವಹಿಸಲಿದ್ದಾರೆ. ರೈಲ್ವೆ ಸುರಕ್ಷತಾ ಆಯುಕ್ತರು ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುತ್ತಾರೆ. ಇಂತಹ ಎಲ್ಲಾ ಅಪಘಾತಗಳನ್ನು ತನಿಖೆ ಮಾಡುತ್ತಾರೆ ಎಂದು ಭಾರತೀಯ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.
ಮೊದಲ ವಂದೇ ಭಾರತ್ ರೈಲನ್ನು ತಯಾರಿಸಿದ ತಂಡದ ನೇತೃತ್ವ ವಹಿಸಿದ್ದ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯ ಮಾಜಿ ಜನರಲ್ ಮ್ಯಾನೇಜರ್ ಸುಧಾಂಶು ಮಣಿ ಪ್ರತಿಕ್ರಿಯಿಸಿ, ಈ ದುರಂತದಲ್ಲಿ ಭಾಗಿಯಾಗಿರುವ ಇಬ್ಬರು ಲೋಕೋ ಪೈಲಟ್‌ಗಳ ಕಡೆಯಿಂದ ಯಾವುದೇ ದೋಷವನ್ನು ತಳ್ಳಿಹಾಕಿದ್ದಾರೆ. ಈ ಸಾಮೂಹಿಕ ಅಪಘಾತಕ್ಕೆ ಪ್ರಾಥಮಿಕ ಕಾರಣವೆಂದರೆ ಮೊದಲನೆಯದ್ದು ಹಳಿತಪ್ಪುವಿಕೆ. ಎರಡನೆಯದ್ದು ಪ್ಯಾಸೆಂಜರ್ ರೈಲಿನ ದುರದೃಷ್ಟಕರ ಸಮಯವಾಗಿದೆ. ಈ ರೈಲು ಇನ್ನೊಂದು ದಿಕ್ಕಿನಿಂದ ಅತಿ ವೇಗದಲ್ಲಿ ಬಂದಿದೆ. ಕೇವಲ ಮೊದಲ ರೈಲು ಹಳಿತಪ್ಪಿದ್ದರೆ, ಬೋಗಿಗಳು ಮಗುಚಿ ಬೀಳುತ್ತಿರಲಿಲ್ಲ ಮತ್ತು ಇಷ್ಟೊಂದು ಸಾವು-ನೋವುಗಳು ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.