ಗೂಂಡಾ ದಾಳಿಯ ಸಂತ್ರಸ್ತರ ಮೇಲೆ ಪೊಲೀಸರಿಂದಲೇ ಹಲ್ಲೆ: ಕಮಿಷನರ್‌ಗೆ ದೂರು
ಗೂಂಡಾ ದಾಳಿಯ ಸಂತ್ರಸ್ತರ ಮೇಲೆ ಪೊಲೀಸರಿಂದಲೇ ಹಲ್ಲೆ: ಕಮಿಷನರ್‌ಗೆ ದೂರು
ಸೋಮೇಶ್ವರ ಕಡಲ ಕಿನಾರೆಯಲ್ಲಿ ನಡೆದಿದ್ದ ಮತೀಯ ಗೂಂಡಾ ದಾಳಿಯ ಸಂತ್ರಸ್ತರ ಜೊತೆಗೆ ಉಳ್ಳಾಲ ಪೊಲೀಸರೂ ಅನುಚಿತವಾಗಿ ವರ್ತಿಸಿದ್ದಾರೆ.
ಈ ಬಗ್ಗೆ ಸ್ವತಃ ಸಂತ್ರಸ್ತ ವಿದ್ಯಾರ್ಥಿ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಅವರಿಗೆ ದೂರು ನೀಡಿದ್ದು, ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ತಮ್ಮ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಈ ದೂರನ್ನು ತಾವು ಗಂಭೀರವಾಗಿ ಪರಿಗಣಿಸಿದ್ದೇನೆ. ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯವರಿಗೆ ಸೂಚಿಸಿರುತ್ತೇನೆ. ಪೊಲೀಸರು ತಪ್ಪಿತಸ್ಥರು ಎಂದು ಕಂಡುಬಂದರೆ ಅವರ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸುವುದಾಗಿ ಕಮಿಷನರ್ ಭರವಸೆ ನೀಡಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯ ಪಿಎಸ್‌ಐ ನಮ್ಮನ್ನು ಠಾಣೆಗೆ ಕರೆಸಿಕೊಂಡು ಖಾಲಿ ಕಾಗದದ ಮೇಲೆ ಸಹಿ ಪಡೆದುಕೊಂಡಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿ ಕಮಿಷನರ್ ಕುಲದೀಪ್ ಜೈನ್ ಅವರಿಗೆ ಲಿಖಿತ ದೂರು ನೀಡಿದ್ದಾರೆ.
ನಗರದ ಪ್ಯಾರಾ ಮೆಡಿಕಲ್ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಮೂವರು ವಿದ್ಯಾರ್ಥಿಗಳ ಜೊತೆಗೆ ಗುರುವಾಗ ಸೋಮೇಶ್ವರ ಕಡಲ ಕಿನಾರೆಗೆ ವಿಹಾರಕ್ಕೆ ತೆರಳಿದ್ದರು. ಸ್ಥಳೀಯ ಯುವಕರ ಗುಂಪು ವಿದ್ಯಾರ್ಥಿಗಳು ವಿಭಿನ್ನ ಧರ್ಮದವರು ಎಂಬ ಕಾರಣಕ್ಕೆ ಹಲ್ಲೆ ನಡೆಸಿತ್ತು.
ಈ ಪ್ರಕರಣದಲ್ಲಿ ಗೂಂಡಾ ದಾಳಿ ನಡೆಸಿದ ಏಳು ಮಂದಿ ಯುವಕರನ್ನು ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.