ಪುತ್ತೂರು: ಅಡಿಕೆ ಮಾರಾಟದ 10 ಲಕ್ಷ ನಗದು ಎಸ್ಕೇಪ್ ಮಾಡಿ ಲಾರಿ ಕಂಡೆಕ್ಟರ್ ಪರಾರಿ
Saturday, July 22, 2023
ಮಂಗಳೂರು: ಅಡಿಕೆ ಮಾರಾಟದಿಂದ ಬಂದ 10 ಲಕ್ಷ ರೂ. ನಗದನ್ನು ಲಾರಿಯಿಂದ ಎಗರಿಸಿ ಲಾರಿ ನಿರ್ವಾಹಕ ಪರಾರಿಯಾಗಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಾರಾಷ್ಟ್ರದ ಪುಣೆಯಲ್ಲಿರುವ ಅಝರ್ ಟ್ರೇಡಿಂಗ್ ಮತ್ತು ಪುತ್ತೂರಿನ ಅಝರ್ ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಮಾಲಕ, ಬನ್ನೂರು ನಿವಾಸಿ ಕಲಂದರ್ ಇಬ್ರಾಹಿಂ ನೌಷದ್ ಹಣ ಕಳೆದುಕೊಂಡ ವ್ಯಕ್ತಿ. ಕಲಂದರ್ ಅವರು ಲಾರಿ ಮೂಲಕ ಪುತ್ತೂರಿನಿಂದ ಪುಣೆಗೆ ಅಡಿಕೆ ಸಾಗಿಸುತ್ತಿದ್ದರು. ಲಾರಿ ಜುಲೈ 18ರಂದು ಪುಣೆಯಿಂದ ಮತ್ತೆ ಮಂಗಳೂರಿಗೆ ವಾಪಸಾಗಿದೆ. ಈ ವೇಳೆ ಪುಣೆಯ ಅಝರ್ ಟ್ರೇಡಿಂಗ್ ಸಂಸ್ಥೆಯ ಸಿಬ್ಬಂದಿ ಸಫ್ರಾಝ್ ಅವರು ಕಲಂದರ್ ಇಬ್ರಾಹಿಂ ನೌಷದ್ ರಿಗೆ ನೀಡಲೆಂದು ಲಾರಿ ಚಾಲಕ ಅಬ್ದುಲ್ ರವೂಫ್ ಮತ್ತು ನಿರ್ವಾಹಕ ಶಿವಕುಮಾರ್ ರಲ್ಲಿ 10ಲಕ್ಷ ರೂ. ನಗದು ನೀಡಿದ್ದರು.
ಲಾರಿಯನ್ನು ಚಾಲಕ ಅಬ್ದುಲ್ ರವೂಫ್ ಮಂಗಳೂರಿನ ತೊಕ್ಕೊಟ್ಟುವಿನಲ್ಲಿ ನಿಲ್ಲಿಸಿ ಮಾರುಕಟ್ಟೆಗೆ ಹೋಗಿದ್ದರು. ಆದರೆ ಅವರು ಬರುವ ವೇಳೆ ಶಿವಕುಮಾರ್ ನಾಪತ್ತೆಯಾಗಿದ್ದರು. ಲಾರಿಯಲ್ಲಿಟ್ಟಿದ್ದ 10 ಲಕ್ಷ ರೂ. ನಗರು ಕೂಡ ಪರಾರಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದೀಗ ನಿರ್ವಾಹಕ ಶಿವಕುಮಾರ್ ಹಣವನ್ನು ಲಾರಿಯಿಂದ ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆಂದು ಶಂಕೆ ವ್ಯಕ್ತಪಡಿಸಿ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.