ಮಂಗಳೂರಿನಲ್ಲಿ 12 ವರ್ಷದ ಬಾಲಕಿಯ ಅತ್ಯಾಚಾರ- ಆರೋಪಿ ಬಂಧನ
Saturday, July 29, 2023
ಮಂಗಳೂರು: 12 ವರ್ಷ 10 ತಿಂಗಳ ಪ್ರಾಯದ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪಿಯನ್ನು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಅಪ್ರಾಪ್ತ ಬಾಲಕಿ ಜುಲೈ 15 ರಂದು ತನ್ನ ತಾಯಿಯೊಂದಿಗೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ಬಂದು ಈ ಬಗ್ಗೆ ದೂರು ನೀಡಿದ್ದಳು. ಬಾಲಕಿ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಬಾಲಕಿಗೆ ಉಳ್ಳಾಲ ಪೇಟೆಯ ಮಹಮ್ಮದ್ ಶಾಫಿ ಯಾನೆ ಶಾಫಿ ಎಂಬವನ ಪರಿಚಯವಿದ್ದು ದಾರಿಯಲ್ಲಿ ಕಾಣಸಿಕ್ಕಿದಾಗ ಮಾತನಾಡುತ್ತಿದ್ದನು.
ಈತ 2023 ರ ಜನವರಿ ತಿಂಗಳಲ್ಲಿ ಅಪ್ರಾಪ್ತ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದ ಸಮಯ ಬಾಲಕಿಯ ಬಾಯಿಗೆ ಕೈ ಹಿಡಿದು ಪಕ್ಕದ ರೂಮಿಗೆ ಎಳೆದುಕೊಂಡು ಹೋಗಿ ಅವಳಿಗೆ ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ಇತರೇ ದಿನಗಳಲ್ಲಿ ಅವಳು ಒಬ್ಬಳೇ ಇದ್ದಾಗ ಆತನು ಮನೆಗೆ ಹೋಗಿ ಅತ್ಯಾಚಾರ ಮಾಡಿದ್ದಾನೆ. ಇದರಿಂದ ಆಕೆಯು ಆರು ತಿಂಗಳ ಗರ್ಭಿಣಿಯಾಗಿದ್ದಾಳೆ.
ಅಪ್ರಾಪ್ತ ಬಾಲಕಿ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಇಂದು ಬೆಳಿಗ್ಗೆ ಬಂಧನ ಮಾಡಿದ್ದಾರೆ. ಆರೋಪಿಯನ್ನು ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಮತ್ತು ಉಳ್ಳಾಲ ಪೊಲೀಸ್ ಠಾಣಾ ಪೊಲೀಸರು ಸೇರಿ ಬಂಧಿಸಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಈ ಪ್ರಕರಣದ ತನಿಖೆಯನ್ನು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕರಾದ ಲೋಕೇಶ್ ಎ.ಸಿ, ರವರು ನಡೆಸುತ್ತಿದ್ದಾರೆ.