ಹೈದರಾಬಾದ್ ವೈದ್ಯರಿಂದ ಅಪರೂಪದ ಶಸ್ತ್ರಚಿಕಿತ್ಸೆ- 14 ತಿಂಗಳ ಕೂಸಿನ ಕಿಡ್ನಿ 58 ವರ್ಷದ ಮಹಿಳೆಗೆ ಕಸಿ
ಹೈದರಾಬಾದ್: ಹೈದರಾಬಾದ್
ನ ವೈದ್ಯರು ಮಾಡಿದ ಅಪರೂಪದ ಶಸ್ತ್ರ ಚಿಕಿತ್ಸೆಯಲ್ಲಿ 14 ತಿಂಗಳ ಮಗುವಿನ
ಮೂತ್ರಪಿಂಡವನ್ನು 58 ವರ್ಷದ ಮಹಿಳೆಗೆ ಕಸಿ ಮಾಡಲಾಗಿದೆ. ಹೈದರಾಬಾದ್ನ ಕಿಮ್ಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಈ ಕಸಿ ಮಾಡಿದ್ದಾರೆ.
ಕಳೆದ
7 ವರುಷಗಳಿಂದ ಮಹಿಳೆ ಮೂತ್ರಪಿಂಡ ಸಮಸ್ಯೆಯಿಂದಾಗಿ ಡಯಾಲಿಸಿಸ್ಗೆ ಒಳಗಾಗುತ್ತಿದ್ದರು. ಇದೇ ವೇಳೆ 14 ತಿಂಗಳ ಕೂಸಿನ ಮೆದುಳು ನಿಷ್ಕ್ರಿಯಗೊಂಡಿತ್ತು. ವೈದ್ಯರು ಮಗು ಸಾಧ್ಯವಿಲ್ಲ
ಎಂದು ತಿಳಿಸಿದಾಗ, ಮಗುವಿನ ಕುಟುಂಬ ಅಂಗಾಂಗ ದಾನಕ್ಕೆ ಮುಂದಾದರು. ಅದರಂತೆ ಮೂತ್ರಪಿಂಡವನ್ನು ಅಗತ್ಯವಿರುವ ಮಹಿಳೆಗೆ ದಾನ ಮಾಡಲು ನಿರ್ಧರಿಸಿದ್ದಾರೆ.
ಸಿಕಂದರಾಬಾದ್ನ
ಕಿಮ್ಸ್ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಅಲ್ಲಿನ ವೈದ್ಯರು ನಡೆಸಿದರು. ಚಿಕ್ಕ ಮಕ್ಕಳ ಅಂಗಗಳು ತುಲನಾತ್ಮಕವಾಗಿ ಚಿಕ್ಕದಾಗಿರುವುದರಿಂದ ವಯಸ್ಸಾದ ಜನರಲ್ಲಿ ಅಳವಡಿಸುವಲ್ಲಿ ಹಲವು ತೊಡಕುಗಳು ಉಂಟಾಗುತ್ತವೆ. ಇದೆಲ್ಲವನ್ನೂ ಮೀರಿ ನುರಿತ ವೈದ್ಯರು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳ ನೆರವಿನಿಂದ ಈ ಸಾಧನೆಯನ್ನು ಮಾಡಿದ್ದಾರೆ.
ಅಪರೂಪದ
ಶಸ್ತ್ರಚಿಕಿತ್ಸೆ ನಡೆಸಿದ ತಂಡದ ನೇತೃತ್ವ ವಹಿಸಿದ್ದ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸಕ ಡಾ.ಉಮಾಮಹೇಶ್ವರ ರಾವ್
ಮಾತನಾಡಿ, "ಅಂಗಾಂಗ ದಾನವೇ ಈಗ ದೊಡ್ಡ ಸಮಸ್ಯೆಯಾಗಿದೆ.
ರೋಗಿಗಳ ಜೀವ ಉಳಿಸಲು ವಿವಿಧ ರೀತಿಯ ಶಸ್ತ್ರಚಿಕಿತ್ಸೆಗಳನ್ನು ಮಾಡುವುದು ಅಗತ್ಯವಾಗಿದೆ. 58 ವರ್ಷ ಹರೆಯದ ಮಹಿಳೆಗೆ 14 ತಿಂಗಳ ಕೂಸಿನ ಮೂತ್ರಪಿಂಡವನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಆಕೆಗೆ ಯಾವುದೇ ಸಮಸ್ಯೆ ಉಂಟಾಗದಂತೆಯೂ ನೋಡಿಕೊಳ್ಳಲಾಗಿದೆ" ಎಂದರು.
"ರೋಗಿಯ
ವಯಸ್ಸು ಮತ್ತು ಅಂಗಾಗದ ಗಾತ್ರದಂತಹ ಎಲ್ಲ ಮೇರೆಗಳನ್ನು ಮೀರಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಇದು
ರೋಗಿಯ ಬದುಕಿಗೆ ಹೊಸ ಭರವಸೆ ನೀಡಲಿದೆ. ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ಅವರು ಹೇಳಿದರು.
"ದಾನಿಗಳ
ಮೂತ್ರಪಿಂಡದ ಗಾತ್ರ ಮತ್ತು ಸ್ವೀಕರಿಸುವವರ ದೇಹವು ಅದನ್ನು ಅಂಗೀಕರಿಸುವ ಸಾಧ್ಯತೆಯನ್ನು ಪರಿಗಣಿಸಬೇಕು. ಮೂತ್ರಪಿಂಡವು 3 ವರ್ಷಗಳವರೆಗೆ ಮಾನವನ ದೇಹದಲ್ಲಿ ಬೆಳೆಯುತ್ತದೆ. ಅದರ ನಂತರ ಬೆಳವಣಿಗೆ ನಿಂತು ಸ್ಥಿರವಾಗುತ್ತದೆ. ಚಿಕ್ಕದಾಗಿದ್ದಾಗ ಕಸಿ ಮಾಡಿದ ನಂತರವೂ ಅದು ಸ್ವೀಕರಿಸಿದವರ ದೇಹದಲ್ಲಿ ಬೆಳೆಯುತ್ತದೆ. ಕೆಲ ಸಂದರ್ಭಗಳಲ್ಲಿ ಯುವಕರ ಮೂತ್ರಪಿಂಡವನ್ನು ವಯಸ್ಸಾದ ವ್ಯಕ್ತಿಗೆ ಕಸಿ ಮಾಡಿದಾಗ ಅಪಧಮನಿಗಳಲ್ಲಿ ಸಮಸ್ಯೆಗಳುಂಟಾಗಬಹುದು" ಎಂದು ಅವರು ಹೇಳಿದರು.
"ಆದರೆ,
ಈ ಶಸ್ತ್ರಚಿಕಿತ್ಸೆಯಲ್ಲಿ ಅಂತಹ ಯಾವುದೇ ಸಮಸ್ಯೆ ಉಂಟಾಗದಂತೆ ವ್ಯವಸ್ಥೆ ಮಾಡಲಾಗಿದೆ. 14 ತಿಂಗಳ ಪುಟ್ಟ ಮಗುವಿನಿಂದ ಸಂಗ್ರಹಿಸಿದ ಕಿಡ್ನಿಯನ್ನು 58ರ ರೋಗಿಗೆ ಕಸಿ
ಮಾಡುವುದು ಸವಾಲಿನ ಕೆಲಸ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಾವು ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ"
ಎಂದು ಅವರು ಹರ್ಷ ವ್ಯಕ್ತಪಡಿಸಿದರು.
"ಅಂಗಾಂಗ
ದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಮೃತರ ಕುಟುಂಬ ಸದಸ್ಯರು ಅಂಗಾಂಗ ದಾನ ಮಾಡುವ ನಿರ್ಧಾರವನ್ನು
ಕೈಗೊಳ್ಳಬೇಕು. ಅವರ ಒಂದು ನಿರ್ಧಾರವು ಅನೇಕ ಜೀವಗಳನ್ನು ಉಳಿಸಲಿದೆ. ವೈದ್ಯಕೀಯ ಕ್ಷೇತ್ರ ವಿಶಾಲವಾಗಿದೆ. ದಾನ ಪಡೆದ ಅಂಗಗಳ ಸಂರಕ್ಷಣೆಗೆ ಹೊಸ ತಂತ್ರಗಳು ಬಂದಿವೆ. ಕೆಲವು ಸಂಸ್ಥೆಗಳು ದಾನದ ಅಂಗಾಂಗಗಳನ್ನು ಸಂಗ್ರಹಿಸುತ್ತಿವೆ. ಇದು ಬೇರೆ ಜೀವಗಳ ಉಳಿವಿಗೆ ಶ್ರಮಿಸುತ್ತಿವೆ" ಎಂದು ಡಾ. ಉಮಾಮಹೇಶ್ವರ ರಾವ್ ತಿಳಿಸಿದರು.