15 ದಿನಗಳ ಹಸುಗೂಸನ್ನು ಹೊತ್ತೊಯ್ದು ಮೇಲ್ಛಾವಣಿಯಿಂದ ಬಿಸಾಡಿದ ಕಳ್ಳಬೆಕ್ಕು: ಪಾಲಕರ ಸಮ್ಮುಖವೇ ನಡೆಯಿತು ಹೃದಯ ವಿದ್ರಾವಕ ಘಟನೆ
Wednesday, July 26, 2023
ಬದೌನ್: ಮಲಗಿದ್ದ ಹಸುಗೂಸೊಂದನ್ನು ಬೆಕ್ಕೊಂದು ಕದ್ದುಕೊಂಡು ಹೋಗಿ ಮೇಲ್ಛಾವಣಿಯಿಂದ ಬಿಸಾಕಿರುವ ಹೃದಯ ವಿದ್ರಾವಕ ಘಟನೆ ಉತ್ತರಪ್ರದೇಶದ ಬದೌನ್ ಎಂಬಲ್ಲಿ ನಡೆದಿದೆ.
15 ದಿನಗಳ ಹಿಂದಷ್ಟೇ ಹುಟ್ಟಿದ ಹಸುಗೂಸು ಬದೌನ್ ನ ಮೊಹಲ್ಲಾ ಹಕಿಂಬದ ನಿವಾಸಿ ಹಸನ್- ಅಸ್ಮಾ ದಂಪತಿಯದ್ದಾಗಿದೆ. ಕೆಲದಿನಗಳ ಹಿಂದೆ ಗಂಡು ಮತ್ತು ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಸೋಮವಾರ ರಾತ್ರಿ ದಂಪತಿ ಮನೆಯ ಟೆರೇಸ್ ಮೇಲೆ ಮಲಗಿದ್ದರು. ಈ ವೇಳೆ ಅಸ್ಮಾಳ ಹತ್ತಿರ ಮಲಗಿದ್ದ ರಿಹಾನ್ ಎಂಬ ಮಗುವನ್ನು ಬೆಕ್ಕು ಹೊತ್ತೊಯ್ದಿದಿದೆ. ಆಗ ಅಸ್ಮಾ ಕಿರುಚಾಡಿದ್ದಾಳೆ. ತಕ್ಷಣವೇ ಪತಿಯು ಬೆಕ್ಕನ್ನು ಬೆನ್ನಟ್ಟಿದ್ದು, ಆಗ ಮಗುವನ್ನು ಛಾವಣಿಯಿಂದ ಬೀಳಿಸಿದ ಬೆಕ್ಕು ಅಲ್ಲಿಂದ ಪರಾರಿಯಾಗಿದೆ. ಪರಿಣಾಮವಾಗಿ ಮಗು ಸಾವನ್ನಪ್ಪಿದೆ.
ಬಳಿಕ ಕುಟುಂಬಸ್ಥರು ಮಗುವಿನ ಶವವನ್ನು ಅಂತ್ಯಸಂಸ್ಕಾರ ಮಾಡಿದ್ದಾರೆ. ಅವಳಿ ಮಕ್ಕಳು ಹುಟ್ಟಿದಾಗಿನಿಂದ ಪ್ರತಿದಿನ ಮನೆಯಲ್ಲಿ ಬೆಕ್ಕು ಕಾಣಿಸಿಕೊಳ್ಳುತ್ತಿತ್ತು. ಕುಟುಂಬಸ್ಥರು ಆಗಾಗ ಓಡಿಸುತ್ತಿದ್ದರು ಹಸನ್ ಪೊಲೀಸರಿಗೆ ತಿಳಿಸಿದ್ದಾರೆ.