18ಲಕ್ಷ ರೂ. ಖರ್ಚು ಮಾಡಿ ಶ್ವಾನವಾಗಿ ರೂಪಾಂತರಗೊಂಡ ವ್ಯಕ್ತಿ
Sunday, July 30, 2023
ಟೋಕಿಯೊ: ಪ್ರಪಂಚದಲ್ಲಿ ಬೇರೆ ಬೇರೆ ರೀತಿಯ ಬಯಕೆ ಉಳ್ಳವರಿರುತ್ತಾರೆ ಆದರೆ ಇಲ್ಲೊಬ್ಬನಿಗೆ ಪ್ರಾಣಿಯಾಗಬೇಕೆಂಬ ಬಯಕೆಯಂತೆ. ಅದಕ್ಕಾಗಿ ಈತ ಸುಮಾರು 22ಸಾವಿರ ಡಾಲರ್ ಖರ್ಚು ಮಾಡಿ ಶ್ವಾನವಾಗಿ ರೂಪಾಂತರಗೊಂಡಿದ್ದಾನೆ ಎಂದು ವರದಿಯಾಗಿದೆ.
ಜಪಾನ್‌ನ 'ಐ ವಾಂಟ್ ಟು ಬಿ ಆ್ಯನ್ ಅನಿಮಲ್' ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಹೊಂದಿರುವ ಈ ವ್ಯಕ್ತಿಯನ್ನು ಶ್ವಾನವಾಗಿ ರೂಪಾಂತರಗೊಳಿಸುವ ಕಾರ್ಯವನ್ನು ಟಿ.ವಿ.ಧಾರಾವಾಹಿ, ಸಿನೆಮಾಗಳಿಗೆ ವೇಷಭೂಷಣ ನಿರ್ಮಿಸಿ ಕೊಡುವ ಝಪೆಟ್ ಎಂಬ ಸಂಸ್ಥೆಗೆ ವಹಿಸಲಾಗಿತ್ತು. ಸುಮಾರು 40 ದಿನದಲ್ಲಿ ಈ ಸಂಸ್ಥೆ ಶ್ವಾನದಂತೆ ಹೋಲುವ ಬಟ್ಟೆಯೊಂದನ್ನು ಸಿದ್ಧಪಡಿಸಿದೆ. ಕೋಲಿ ನಾಯಿ(ಆಲ್ಸೀಷನ್ ತಳಿಯನ್ನು ಹೋಲುವ) ಮಾದರಿಯಲ್ಲಿ ಇದು ನಾಲ್ಕು ಕಾಲುಗಳ ಮೇಲೆ ನಡೆಯುವ ನಿಜವಾದ ಶ್ವಾನದಂತೆ ಕಂಡು ಬಂದಿದ್ದಾನೆ.
''ಪ್ರಾಣಿಯಾಗಬೇಕೆಂಬ ಬಾಲ್ಯಕಾಲದ ಕನಸು ಈಗ ನನಸಾಗಿದೆ. ಆದರೆ ಈ ಕನಸಿನ ಬಗ್ಗೆ ಎಲ್ಲರಲ್ಲೂ ಹೇಳಿಕೊಳ್ಳಲು ಹಿಂಜರಿಕೆಯಿತ್ತು. ಈಗ ನಾನು ಪ್ರಾಣಿಯಾಗಿರುವುದನ್ನು ತಿಳಿದ ಬಳಿಕ ನನ್ನ ಕುಟುಂಬದವರಿಗೆ, ಸ್ನೇಹಿತರಿಗೆ ಅಚ್ಚರಿಯಾಗಬಹುದು ಎಂದು ಈ ವ್ಯಕ್ತಿ ಹೇಳಿದ್ದಾನೆ. ಶ್ವಾನದಂತೆ ಕಾಣುವ ಡ್ರೆಸ್ ಧರಿಸಿ, ಕುತ್ತಿಗೆಗೆ ಚೈನ್ ಬಿಗಿಯಲ್ಪಟ್ಟು ಶ್ವಾನದಂತೆ ನಾಲ್ಕು ಕಾಲಿನ ಮೇಲೆ ನಡೆದುಕೊಂಡು ಪಾಕ್‌ರ್ನಲ್ಲಿ ಅಡ್ಡಾಡುತ್ತಿರುವ ವೀಡಿಯೊವನ್ನು ಈತ ತನ್ನ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಇದಕ್ಕೆ ಆತ 22ಸಾವಿರ ಡಾಲರ್ ಖರ್ಚು ಮಾಡಿದ್ದಾನಂತೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ 18ಲಕ್ಷವಂತೆ.