ಎಸೆಸೆಲ್ಸಿಯಲ್ಲಿ ಫೇಲಾದ ವ್ಯಕ್ತಿ ಕೃಷಿಯಲ್ಲಿ ಗೆಲುವು: ಟೊಮ್ಯಾಟೊ ಬೆಳೆದು ಒಂದೇ ತಿಂಗಳಲ್ಲಿ 1.8ಕೋಟಿ ರೂ. ಲಾಭ
Sunday, July 23, 2023
ಹೈದರಾಬಾದ್: ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದ ತೆಲಂಗಾಣದ ರೈತ ಬಿ. ಮಹಿಪಾಲ್ ರೆಡ್ಡಿ ಕೃಷಿಯತ್ತ ಮುಖ ಮಾಡಿದರು. ಇದೀಗ ಅವರು ಪರಿಶ್ರಮದಿಂದ ಟೊಮ್ಯಾಟೋ ಬೆಳೆದು ಕೇವಲ ಒಂದೇ ತಿಂಗಳಿನಲ್ಲಿ 1.8 ಕೋಟಿ ರೂ. ಲಾಭ ಮಾಡಿದ್ದಾರೆ.
ಇದೀಗ ದೇಶದಲ್ಲಿ ಟೊಮ್ಯಾಟೋ ಕೊರತೆಯಿಂದ ಬೆಲೆ ಗಗನಕ್ಕೇರಿದೆ. ಇದು ಮಹಿಪಾಲ್ಗೆ ವರವಾಗಿ ಪರಿಣಮಿಸಿದೆ. ಅವರೀಗ ಟೊಮ್ಯಾಟೋ ಬೆಳೆಯಿಂದ ಕೋಟ್ಯಧಿಪತಿಯಾಗಿದ್ದಾರೆ. ಟೊಮ್ಯಾಟೋಗೆ ಭಾರೀ ಬೇಡಿಕೆ ಇದ್ದು, ಹೈದರಾಬಾದ್ ಮಾರುಕಟ್ಟೆಯಲ್ಲಿ ಕೆಜಿಗೆ 100 ರೂಪಾಯಿಯಂತೆ ಮಾರಾಟವಾಗುತ್ತಿದೆ.
ಮಹಿಪಾಲ್ ತಮ್ಮ 8 ಎಕರೆ ತೋಟದಲ್ಲಿ ಟೊಮ್ಯಾಟೋ ಕೃಷಿ ಮಾಡಿದ ಸಮಯದಲ್ಲೇ ದೇಶದಲ್ಲಿ ಟೊಮ್ಯಾಟೋ ಬಿಕ್ಕಟ್ಟು ತಲೆದೂರಿದೆ. ಇದು ಅವರಿಗೆ ಲಾಭವಾಗಿ ಪರಿಣಮಿಸಿದೆ. ಎಪ್ರಿಲ್ 15ರಂದು ಟೊಮ್ಯಾಟೋ ಬೆಳೆಯಲು ಆರಂಭಿಸಿದ ಮಹಿಪಾಲ್, ಜೂನ್ 15ರಂದು ಫಸಲು ದೊರಕಿ ಮಾರಾಟ ಮಾಡಲು ಆರಂಭಿಸಿದ್ದಾರೆ
ಅನಿರೀಕ್ಷಿತ ಮಳೆಯಿಂದಾಗಿ ಎಂಟು ಎಕರೆಯಲ್ಲಿ ಬೆಳೆದಿದ್ದ ಬೆಳೆಯಲ್ಲಿ ಕೆಲವು ಬೆಳೆ ನಷ್ಟವಾಗಿತ್ತು. ಇದು ಮಹಿಪಾಲ್ಗೆ ನಷ್ಟವಾಗುವ ಆತಂಕವೂ ಕಾಡಿತ್ತು. ಆದರೆ, 40 ರಷ್ಟು ಬೆಳೆಗಳು ಇನ್ನೂ ಹಾಳಾಗದಿರುವುದರಿಂದ ಈ ಋತುವಿನಲ್ಲಿ ಅವರ ಆದಾಯವು 2 ಕೋಟಿ ರೂ.ಗಳನ್ನು ತಲುಪಲಿದೆ ಎಂದು ಹೇಳಿದ್ದಾರೆ.
ಈ ವರ್ಷ ಅವರು ಟೊಮ್ಯಾಟೋ ಕೃಷಿ ಮಾಡಲು ಪ್ರತಿ ಎಕರೆಗೆ ಸುಮಾರು ಎರಡು ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಇದೀಗ ಉತ್ತಮ ಇಳುವರಿ ಬಂದಿದ್ದು, ಅವರು ಶ್ರಮ ಫಲಪ್ರದವಾಗಿದೆ. ಈವರೆಗೂ 7,000 ಬಾಕ್ಸ್ ಟೊಮ್ಯಾಟೋ ಮಾರಾಟ ಮಾಡಿರುವ ಮಹಿಪಾಲ್ ಒಂದೇ ತಿಂಗಳಲ್ಲಿ 1.8 ಕೋಟಿ ರೂ. ಸಂಪಾದನೆ ಮಾಡಿದ್ದಾರೆ.