ಭಾರತ ಮೂಲದ 21 ವರ್ಷದ ಯುವತಿಯ ಜೀವಂತ ಸಮಾಧಿ – ಪ್ರೀತಿಸುವಂತೆ ಪೀಡಿಸುತ್ತಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಸಾಧ್ಯತೆ
ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಭಾರತ ಮೂಲದ ಯುವತಿಯೊಬ್ಬಳನ್ನು
ಪ್ರೀತಿಸುವಂತೆ ಪೀಡಿಸಿ ಜೀವಂತವಾಗಿ ಸಮಾಧಿ ಮಾಡಿದ ಪ್ರಕರಣದಲ್ಲಿ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
21 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಜಸ್ಮೀನ್ ಕೌರ್ ಎಂಬ ಯುವತಿಯನ್ನು ಆರೋಪಿ ತಾರಿಕ್ಜೋತ್ ಸಿಂಗ್ 2021ರ ಮಾರ್ಚ್ನಲ್ಲಿ ಅಪಹರಿಸಿದ್ದ. ಬಳಿಕ ಕೇಬಲ್ ಹಾಗೂ ಗಮ್ ಟೇಪ್ ಬಳಸಿ ಕೈ ಕಾಲುಗಳಿಗೆ ಸುತ್ತಿ ಆಕೆಯನ್ನು ಜೀವಂತವಾಗಿ ಸಮಾಧಿ ಮಾಡಿದ್ದ. ಆತ ಈ ಕುಕೃತ್ಯವನ್ನು ಆಕೆಯ ಮೇಲಿನ ದ್ವೇಷದಿಂದ ಮಾಡಿದ್ದಾನೆ ಎಂದು
ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಫೆಬ್ರುವರಿಯಲ್ಲಿ ಆತನ ವಿಚಾರಣೆ ನಡೆಸಿದ್ದಾಗ ಆರೋಪಿ ಆಕೆಯ ಕೊಲೆ ಮಾಡಿದ್ದಾಗಿ ತಪ್ಪೋಪ್ಪಿಕೊಂಡಿದ್ದ. ಬಳಿಕ ಯುವತಿಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದರು.
ಈ ಬಗ್ಗೆ ಮಾತನಾಡಿರುವ ಯುವತಿಯ ತಾಯಿ, ಆರೋಪಿ ತನ್ನ ಮಗಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಆಕೆ ಆತನನ್ನು ನಿರಾಕರಿಸಿದ್ದಳು. ಇದರಿಂದಾಗಿ ಆತ ಈ ಕೃತ್ಯ ಎಸಗಿದ್ದಾನೆ. ಆತ ಕ್ಷಮೆಗೆ ಯೋಗ್ಯನಾಗಿಲ್ಲ, ನನ್ನ ಮಗಳ ಸಂಕಟ ನೆನೆದು ದುಃಖವಾಗುತ್ತಿದೆ ಎಂದಿದ್ದಾರೆ.
ಈ ಬಗ್ಗೆ ನ್ಯಾಯಾಲಯದಲ್ಲಿ ವಾದಿಸಿರುವ ಕೌರ್ ಪರ ವಕೀಲ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಮನವಿಯನ್ನು ಮಾಡಿದ್ದಾರೆ.