ಮನೆಯ ಡ್ರೆಸ್ಸಿಂಗ್ ಟೇಬಲ್ ನಡಿಯಲ್ಲಿ ಪತ್ತೆಯಾಯಿತು 24 ನಾಗರಹಾವು, 60ಮೊಟ್ಟೆಗಳು ಪತ್ತೆ
Sunday, July 16, 2023
ಬಿಹಾರ: ಹಾವಿನ ಭಯ ಎಲ್ಲರಿಗೂ ಇರುತ್ತದೆ. ಆದ್ದರಿಂದ ಎಲ್ಲರೂ ಹಾವು ಕಂಡಾಗ ಮಾರು ದೂರ ಓಡಿ ಹೋಗುತ್ತಾರೆ. ಅದರಲ್ಲೂ ನಾಗರಹಾವನ್ನು ಕಂಡರೆ ಯಾರಾದರೂ ಸುತ್ತಮುತ್ತಲು ಹೋಗಲು ಹೆದರುತ್ತೇವೆ. ಆದರೆ ಬಿಹಾರದ ಬಾಘಾ ಜಿಲ್ಲೆಯ ಮಧುಬನಿ ಗ್ರಾಪಂನ ಮನೆಯ ಡ್ರೆಸ್ಸಿಂಗ್ ಟೇಬಲ್ ಕೆಳಗಡೆ 24 ನಾಗರಹಾವು ಮರಿಗಳು ಕಂಡು ಮನೆಮಂದಿ ಹೌಹಾರಿದ್ದಾರೆ.
ಗ್ರಾಮದ ಮದನ್ ಚೌಧರಿ ಎಂಬುವರು ತಮ್ಮ ಮನೆಯ ಮೆಟ್ಟಿಲುಗಳ ಕೆಳಗಡೆ ಡ್ರೆಸ್ಸಿಂಗ್ ಟೇಬಲ್ ಇಟ್ಟಿದ್ದರು. ಮನೆಯ ಮಕ್ಕಳು ಮೆಟ್ಟಿಲುಗಳ ಬಳಿ ಆಟವಾಡುತ್ತಿದ್ದಾಗ ಹಾವು ಹಾದು ಹೋಗಿರುವುದನ್ನು ಕಂಡು ಮಕ್ಕಳು ಒಮ್ಮೆಲೆ ಕಿರುಚಿದ್ದಾರೆ. ಮಕ್ಕಳ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಅಲ್ಲಿಗೆ ಆಗಮಿಸಿದರು. ಕುಟುಂಬಸ್ಥರು ಡ್ರೆಸ್ಸಿಂಗ್ ಟೇಬಲ್ ಬಳಿ ಬಂದು ನೋಡಿದಾಗ ನಾಗರಹಾವು ಕಾಣಿಸಿಕೊಂಡಿದೆ.
ಡ್ರೆಸ್ಸಿಂಗ್ ಟೇಬಲ್ ಅನ್ನು ಸ್ವಲ್ಪ ಸರಿಸಿ ನೋಡಿದಾಗ ಇನ್ನು ನಾಲ್ಕು ಹಾವುಗಳು ಕಂಡು ಬಂದಿದೆ. ತಕ್ಷಣ ಮನೆಯವರು ಹಾಗೂ ಸ್ಥಳೀಯರು ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಡ್ರೆಸ್ಸಿಂಗ್ ಟೇಬಲ್ ಕೆಳಗೆ ನೋಡಿದಾಗ 24 ನಾಗರ ಹಾವುಗಳು ಜೊತೆಗೆ 60 ಮೊಟ್ಟೆಗಳು ಪತ್ತೆಯಾಗಿವೆ. ಹಾವು ಮತ್ತು ಮೊಟ್ಟೆಗಳನ್ನು ಚೀಲದಲ್ಲಿ ಹಾಕಿದ ಉರಗ ತಜ್ಞ ಅವುಗಳನ್ನು ಕಾಡಿನ ಅಂಚಿನಲ್ಲಿ ಬಿಟ್ಟು ಹೋಗಿ ಬಿಟ್ಟಿದ್ದಾರೆ.
ಈ ಘಟನೆಯಿಂದ ಕುಟುಂಬಸ್ಥರ ಜತೆಗೆ ಸುತ್ತಮುತ್ತಲಿನವರೂ ಭಯಭೀತರಾಗಿದ್ದಾರೆ. ಪ್ರತಿದಿನ ಆ ಭಾಗದಲ್ಲಿ ಮಕ್ಕಳು ಆಟವಾಡುತ್ತಿದ್ದು, ಅದೃಷ್ಟವಶಾತ್ ಮಕ್ಕಳಿಗೆ ಯಾವುದೇ ಅವಘಡ ಸಂಭವಿಸಿಲ್ಲ ಎಂದು ಮನೆಯ ಮಾಲೀಕ ಮದನ್ ಚೌಧರಿ ತಿಳಿಸಿದ್ದಾರೆ.