35 ವರ್ಷಗಳ ಬಳಿಕ ತಾಯಿ - ಮಗನನ್ನು ಒಂದು ಮಾಡಿದ ಪ್ರವಾಹ
ನವದೆಹಲಿ: ಪ್ರವಾಹ, ಪ್ರಾಕೃತಿಕ ವಿಪತ್ತುಗಳು ಕುಟುಂಬವನ್ನು ಬೇರೆ ಬೇರೆ ಮಾಡಿರುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ತಾಯಿ-ಮಗ ಪ್ರವಾಹದಿಂದಲೇ 35 ವರ್ಷಗಳ ಬಳಿಕ ಒಗ್ಗೂಡಿದ ಅತ್ಯಪರೂಪದ ಪ್ರಕರಣವೊಂದು ಪಂಜಾಬ್ನ ಪಟಿಯಾಲಾದಲ್ಲಿ ನಡೆದಿದೆ.
ಜಗಜಿತ್ ಸಿಂಗ್ ಎಂಬ 37 ವರ್ಷದ ವ್ಯಕ್ತಿ 35 ವರ್ಷಗಳ ಬಳಿಕ ತಾಯಿಯನ್ನು ನೋಡುವಂತಾಗಿದೆ. ಜಗಜಿತ್ ಸಿಂಗ್ಗೆ 2 ವರ್ಷವಿದ್ದಾಗ ತಂದೆ ತೀರಿಹೋಗಿದ್ದರು. ಆ ಬಳಿಕ ತಾಯಿ ಎರಡನೇ ಮದುವೆಯಾಗಿದ್ದರು. ಆದ್ದರಿಂದ ಜಗಜಿತ್ ಸಿಂಗ್ ನನ್ನು ಅಜ್ಜ-ಅಜ್ಜಿ ತಮ್ಮ ಸುಪರ್ದಿಗೆ ತೆಗೆದುಕೊಂಡು ಬೆಳೆಸಿದ್ದರು. ಅಲ್ಲದೆ ಜಗಜಿತ್ ತಂದೆ-ತಾಯಿ ಅಪಘಾತದಲ್ಲಿ ತೀರಿಹೋಗಿದ್ದರು ಎಂದು ಸುಳ್ಳು ಹೇಳಿದ್ದರು.
ಇತ್ತೀಚೆಗೆ ಪಂಜಾಬ್ನ ಪಟಿಯಾಲದ ಪ್ರವಾಹಪೀಡಿತ ಪ್ರದೇಶಕ್ಕೆ ರಕ್ಷಣಾ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಜಗಜಿತ್ ಆಗಮಿಸಿದ್ದನು. ಪಟಿಯಾಲದ ಬೊಹರ್ಪುರ ಗ್ರಾಮದಲ್ಲಿ ತಾಯಿಯ ತಂದೆ-ತಾಯಿಯಿದ್ದಾರೆ ಎಂದು ಸಂಬಂಧಿಕರೊಬ್ಬರು ಹೇಳುತ್ತಿದ್ದುದನ್ನು ನೆನಪಿಸಿಕೊಂಡ ಜಗಜಿತ್ ಆ ಗ್ರಾಮವನ್ನು ಅರಸಿಕೊಂಡು ಹೋಗಿ ವಿಚಾರಿಸಿದ್ದ.
ಬಳಿಕ ತಾನು ಹುಡುಕುತ್ತಿದ್ದ ಮನೆಯ ವಿಳಾಸ ಸಿಕ್ಕಾಗ ಅಲ್ಲಿ ಮಂಚದ ಮೇಲೆ ಮಲಗಿದ್ದ ವೃದ್ಧೆಯೊಬ್ಬಳ ಬಳಿ ವಿಚಾರಿಸಿದ್ದಾನೆ. ಆಗ ಆಕೆಯೇ ತನ್ನ ತಾಯಿಯ ತಾಯಿ ಎಂಬುದು ಗೊತ್ತಾಗಿದೆ. ತಾಯಿಯ ತಂದೆ-ತಾಯಿ ಜೀವಂತವಿದ್ದಾರೆ, ಆದರೆ ವೈಮನಸ್ಯದಿಂದ ನಾವು ಮಾತಾಡುತ್ತಿಲ್ಲ ಎಂದು ಅಜ್ಜ-ಅಜ್ಜಿ ಹೇಳುತ್ತಿದ್ದುದನ್ನು ಜಗಜಿತ್ ಹೇಳಿಕೊಂಡಿದ್ದ.
ತನ್ನ ತಾಯಿಯ ಹೆತ್ತವರ ಕುರಿತು ತಿಳಿದಿದ್ದ ಎಲ್ಲರೂ 2014ರ ಬಳಿಕ ಯಾರೂ ಜೀವಂತ ಇರದ ಕಾರಣ ಹೆಚ್ಚಿನ ವಿಷಯ ಗೊತ್ತಾಗಲಿಲ್ಲ. ಆದರೆ ಸಂಬಂಧಿಯೊಬ್ಬರು ಬೊಹರ್ಪುರ ಎಂಬ ಗ್ರಾಮದ ಕುರಿತು ಹೇಳುತ್ತಿದ್ದುದು ನೆನಪಿದ್ದರಿಂದ ಹುಡುಕಿಕೊಂಡು ಬಂದೆ ಎಂದ ಜಗಜಿತ್ಗೆ ಕೊನೆಗೂ 35 ವರ್ಷಗಳ ಬಳಿಕ ತಾಯಿಯ ದರ್ಶನವಾಗಿದೆ. ಜಗಜಿತ್ ತನ್ನ ಈ ಭಾವುಕ ಕ್ಷಣಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.