ಟೊಮ್ಯಾಟೊ ಬೆಳೆದು 45 ದಿನಗಳಲ್ಲೇ ಲಕ್ಷಾಂತರ ರೂ. ಹಣ ಗಳಿಸಿದ ಪದವೀಧರ ಕೃಷಿಕ
Sunday, July 16, 2023
ಚಿಕ್ಕೋಡಿ: ಈಗ ಟೊಮ್ಯಾಟೊಗೆ ಡಿಮ್ಯಾಂಡಪ್ಪೊ ಡಿಮಾಂಡ್ ಕಾಲ. ಟೊಮ್ಯಾಟೊ ಬೆಳೆದ ರೈತರಲ್ಲಿ ಅನೇಕರು ಕೆಲವೇ ದಿನಗಳಲ್ಲಿ ಲಕ್ಷಾಧಿಪತಿಗಳಾಗಿದ್ದಾರೆ. ಇದೀಗ ಆ ಪಟ್ಟಿಗೆ ಪದವೀಧರ ಯುವಕನೊಬ್ಬನು ಸೇರಿದ್ದಾನೆ. ಈತ ಟೊಮ್ಯಾಟೊ ಬೆಳೆದ 45 ದಿನಗಳಲ್ಲೇ ಲಕ್ಷಗಟ್ಟಲೆ ಹಣ ಗಳಿಸಿದ್ದಾನೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹೆಬ್ಬಾಳ ಗ್ರಾಮದ ಯುವರೈತ ಮಹೇಶ ಹಿರೇಮಠ ಟೊಮ್ಯಾಟೊ ಬೆಳೆದು ಭರ್ಜರಿ ಲಾಭ ಗಳಿಸಿರುವ ಕೃಷಿಕ. ಬಿಎ ಪದವೀಧರರಾಗಿರುವ ಇವರು ಇದೀಗ ಟೊಮ್ಯಾಟೊ ಬೆಳೆದು ಭರ್ಜರಿ ಲಾಭ ಗಳಿಸಿದ ಸಂಭ್ರಮದಲ್ಲಿದ್ದಾರೆ.
ಎರಡು ಲಕ್ಷ ರೂ. ಖರ್ಚು ಮಾಡಿ 20 ಗುಂಟೆಯಲ್ಲಿ ಟೊಮ್ಯಾಟೊ ಬೆಳೆದ ಮಹೇಶ್, 45 ದಿನಗಳಲ್ಲಿ ಟೊಮ್ಯಾಟೊ ಇಳುವರಿ ಮಾಡಿ ಒಟ್ಟು 11 ಲಕ್ಷ ರೂ. ಸಂಪಾದಿಸಿದ್ದಾರೆ. ಮಾರ್ಚ್ ವೇಳೆಗೆ 20 ಗುಂಟೆಯಲ್ಲಿ 3,700 ಟೊಮ್ಯಾಟೊ ಸಸಿ ನಾಟಿ ಮಾಡಿದ್ದ ಮಹೇಶ್, ವೈಜ್ಞಾನಿಕ ಕೃಷಿ, ಹನಿ ನೀರಾವರಿ ಮೂಲಕ ಅದನ್ನು ಆರೈಕೆ ಮಾಡಿದ್ದಾರೆ. ಫಸಲು ಬರುತ್ತಿದ್ದಂತೆ ಟೊಮ್ಯಾಟೊಗೆ ಬಂಗಾರದ ಬೆಲೆ ಬಂದಿದ್ದು, ಕಳೆದ 45 ದಿನಗಳಲ್ಲಿ 20 ಟನ್‌ಗೂ ಅಧಿಕ ಟೊಮ್ಯಾಟೊ ಇಳುವರಿ ತೆಗೆದು, ಅದನ್ನು ಸಂಕೇಶ್ವರ ಎಪಿಎಂಸಿಗೆ ಸರಬರಾಜು ಮಾಡಿ ಲಕ್ಷಗಟ್ಟಲೆ ಹಣ ಎಣಿಸಿದ್ದಾರೆ.