5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ
Sunday, July 30, 2023
ತಿರುವನಂತಪುರಂ : ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆಗೈದ ಅಮಾನವೀಯ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಆಲುವಾದಲ್ಲಿ ನಡೆದಿದೆ.
ಮುಕ್ಕತ್ ಪ್ಲಾಜಾದಲ್ಲಿ ಬಾಡಿಗೆ ಕಟ್ಟಡದಲ್ಲಿ ವಾಸವಾಗಿರುವ ಬಿಹಾರದ ಮೂಲದ ಕಾರ್ಮಿಕನ 5 ವರ್ಷದ ಪುತ್ರಿ ಶುಕ್ರವಾರ ಸಂಜೆ ನಾಪತ್ತೆಯಾಗಿದ್ದಳು. ಈ ಬಗ್ಗೆ ತಂದೆ ಪೊಲೀಸರಿಗೆ ದೂರು ನೀಡಿದ್ದರು.
ಕೂಡಲೇ ತನಿಖೆ ಆರಂಭಿಸಿದ ಪೊಲೀಸರಿಗೆ ನಗರದ CCTV ದೃಶ್ಯಾವಳಿಯೊಂದರಲ್ಲಿ ಅಶ್ವಾಕ್ ಎಂಬಾತ ಮಗುವನ್ನು ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಆತನನ್ನು ತೊಟ್ಟಕ್ಕಾಟ್ ತೀರದಿಂದ ಬಂಧಿಸಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಆದರೆ, ಮದ್ಯ ಸೇವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನಿಂದ
ಯಾವುದೇ ಮಾಹಿತಿ ಸಂಗ್ರಹಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಶನಿವಾರ ಬೆಳಗ್ಗೆ ಬಾಲಕಿಯ ಮೃತದೇಹ ಆಲುವಾ ಮಾರುಕಟ್ಟೆಯ ತ್ಯಾಜ್ಯ ಎಸೆಯುವ ನಿರ್ಜನ ಪ್ರದೇಶದಲ್ಲಿ ಗೋಣಿಚೀಲದಲ್ಲಿ ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಗೋಣಿಚೀಲದಲ್ಲಿ ಮಗುವಿನ ಕೈ ಹೊರಗೆ ಕಾಣಿಸಿರುವುದು ಮೃತದೇಹ ಪತ್ತೆಗೆ ಸಾಧ್ಯವಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬಾಲಕಿಯ ತಂದೆಯನ್ನು ಸ್ಥಳಕ್ಕೆ ಕರೆ ತಂದು ಮೃತದೇಹ ಪುತ್ರಿಯದ್ದೆಂದು ಖಚಿತಪಡಿಸಿಕೊಂಡಿದ್ದಾರೆ. ಶನಿವಾರ ಬೆಳಗ್ಗೆ ನಶೆ ಇಳಿದ ಮೇಲೆ 'ಹಣಕ್ಕಾಗಿ ಮಗುವನ್ನು ಜಾಕೀರ್ ಎಂಬಾತನಿಗೆ ಒಪ್ಪಿಸಿದೆ' ಎಂದು ಪೊಲೀಸರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾನೆ.
ಕೊನೆಗೂ ವಿಚಾರಣೆ ತೀವ್ರಗೊಳಿಸಿದಾಗ ಕೊಲೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕತ್ತು ಹಿಸುಕಿ, ಬಾಲಕಿ ಧರಿಸಿದ್ದ ಬನಿಯನ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ.