ಸುಳ್ಯ: 50 ಎಕರೆ ಜಾಗದ ತಕರಾರು - ಅಣ್ಣತಮ್ಮಂದಿರ ನಡುವಿನ ಜಗಳ ಸೋದರನ ಕೊಲೆಯಲ್ಲಿ ಅಂತ್ಯ
Friday, July 14, 2023
ಸುಳ್ಯ: 50 ಎಕರೆ ಜಾಗದ ತಕರಾರಿಗೆ ಅಣ್ಣ- ತಮ್ಮಂದಿರ ನಡುವಿನ ಜಗಳ ಸೋದರನೋರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಕೊಡಗು ಗಡಿಭಾಗದ ಸಂಪಾಜೆ ಸಮೀಪದ ಚೆಂಬು ಗ್ರಾಮದಲ್ಲಿ ನಡೆದಿದೆ.
ಕುದ್ರೆಪಾಯ ನಿವಾಸಿ ಉಸ್ಮಾನ್ ಕೊಲೆಯಾದ ದುರ್ದೈವಿ.
ಕುದ್ರೆಪಾಯದಲ್ಲಿ ಇವರ ಜಾಗವಿದ್ದು ಪಾಲು ಆಗದ ವಿಚಾರದಲ್ಲಿ ವಿವಾದವಿತ್ತು. ಇದ್ದೇ ಕಾರಣಕ್ಕೆ ಸತ್ತಾರ್, ರಫೀಕ್, ಇಸುಬು, ಅಬ್ಬಾಸ್, ಉಸ್ಮಾನ್ ಸಹೋದರರ ನಡುವೆ ಸುಮಾರು 50 ಎಕರೆ ಕೃಷಿ ಭೂಮಿಯ ವಿಚಾರದಲ್ಲಿ ಗಲಾಟೆ ನಡೆಯುತ್ತಿತ್ತು.
ಶುಕ್ರವಾರ ಇವರು ಚೆಂಬು ಗ್ರಾಮದ ಕುದ್ರೆಪಾಯದ ಸಮೀಪದ ಜಾಗಕ್ಕೆ ಹೋಗಿದ್ದರು. ಆಸ್ತಿ ವಿಚಾರದಲ್ಲಿ ಆಗಲೂ ಸಹೋದರರ ನಡುವೆ ಮಾತಿಗೆ ಮಾತು ಬೆಳೆದಿದೆ. ತೀವ್ರ ಚರ್ಚೆ ನಡೆದು ಕೋಪದ ತೀವ್ರತೆಯಲ್ಲಿ ಸಹೋದರರು ಸೇರಿ ಚೂರಿಯಿಂದ ಇರಿದು ಉಸ್ಮಾನ್ ಅವರನ್ನು ಹತ್ಯೆ ನಡೆಸಿರುವುದಾಗಿ ತಿಳಿದುಬಂದಿದೆ. ಸಂಪಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.