ದಲಿತ ಯುವಕರಿಬ್ಬರಿಗೆ ಮಲ ತಿನ್ನಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ: ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಈ ಶಿಕ್ಷೆ, ಒಂದೇ ಕುಟುಂಬದ 7ಮಂದಿ ಅರೆಸ್ಟ್
Saturday, July 8, 2023
ಭೋಪಾಲ್: ದಲಿತ ಯುವಕರಿಬ್ಬರಿಗೆ ಬಲವಂತವಾಗಿ ಮಲ ತಿನ್ನಿಸಿ, ಚಪ್ಪಲಿ ಹಾರ ಹಾಕಿರುವ ಹೀನ ಕೃತ್ಯ ಎಸಗಿರುವ ಆರೋಪದ ಮೇಲೆ ಮಧ್ಯಪ್ರದೇಶದ ಶಿವಪುರಿ ಆಡಳಿತ ಒಂದೇ ಕುಟುಂಬದ ಏಳು ಮಂದಿಯನ್ನು ಬಂಧಿಸಿದೆ. ಇದಲ್ಲದೆ ಆರೋಪಿಗಳ ಮನೆಗಳನ್ನು ಕೆಡವಿ ಹಾಕಿದೆ.
ಅಜತ್ ಖಾನ್, ವಕೀಲ್ ಖಾನ್, ಆರಿಫ್ ಖಾನ್, ಶಾಹಿದ್ ಖಾನ್, ಇಸ್ಲಾಂ ಖಾನ್, ರಹೀಶಾ ಬಾನೋ ಮತ್ತು ಸೈನಾ ಬಾನೊ ಬಂಧಿತ ಆರೋಪಿಗಳು.
ಈ ಯುವಕರು ಆರೋಪಿಗಳ ಮನೆಯ ಯುವತಿಯೊಂದಿಗೆ ಮಾತನಾಡಿದ್ದಾರೆ ಎನ್ನುವ ಕಾರಣದಿಂದ ಅಮಾನವೀಯ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೂನ್ 30 ರಂದು ಶಿವಪುರಿ ಜಿಲ್ಲೆಯ ವರ್ಖಾಡಿ ಗ್ರಾಮದಲ್ಲಿ ಇವರ ಮೇಲೆ ದೌರ್ಜನ್ಯ ನಡೆದಿತ್ತು. ಅದರ ವಿಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಶಿವಪುರಿ ಪೊಲೀಸ್ ಅಧೀಕ್ಷಕ (ಎಸ್‌ಪಿ) ರಘುವಂಶ್ ಭಡೋರಿಯಾ ಪ್ರಕಾರ, ರಾಜ್ಯದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ನಿರ್ದೇಶನದ ಮೇರೆಗೆ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಯನ್ನು ಹಾಕಲು ಆದೇಶಿಸಿದ್ದಾರೆ.
23 ಮತ್ತು 24 ವರ್ಷದ ಇಬ್ಬರು ಯುವಕರು ಆರೋಪಿಯ ಕುಟುಂಬದ 26 ವರ್ಷದ ಯುವತಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಈ ವಿಚಾರ ತಿಳಿದ ಮನೆಯವರು ಅವರಿಬ್ಬರನ್ನು ತಮ್ಮ ಮನೆಗೆ ಕರೆ ತರುವಂತೆ ಯುವತಿ ಯಲ್ಲಿ ತಿಳಿಸಿದ್ದಾರೆ. ಅದರಂತೆ ಜೂನ್ 30 ರಂದು ಇಬ್ಬರೂ ಮನೆರೆ ಬಂದಿದ್ದಾರೆ. ಆಗ ಮನೆಯವರು ಅಮಾನುಷವಾಗಿ ಥಳಿಸಿದ್ದಾರೆ. ಆರೋಪಿಗಳು ದಲಿತರ ಮುಖಕ್ಕೆ ಕಪ್ಪು ಬಣ್ಣ ಬಳಿದು, ಮಲವನ್ನು ತಿನ್ನುವಂತೆ ಒತ್ತಾಯಿಸಿದ್ದಾರೆ. ಅವರಿಗೆ ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ" ಎಂದು ಎಸ್‌ಪಿ ರಘುವಂಶ್ ಸಿಂಗ್ ಭಡೋರಿಯಾ ಹೇಳಿದ್ದಾರೆ.
ಮಹಿಳೆಗೆ ಕಿರುಕುಳ ನೀಡಿದ್ದಕ್ಕಾಗಿ ಮತ್ತು ಅನುಚಿತವಾಗಿ ಸ್ಪರ್ಶಿಸಿದ್ದಕ್ಕಾಗಿ ಇಬ್ಬರು ಯುವಕರನ್ನು ಥಳಿಸಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ. ಆದರೆ ತನಿಖೆಯ ಸಂದರ್ಭ ಕುಟುಂಬದವರ ಹೇಳಿಕೆಗಳು ಸುಳ್ಳು ಎಂದು ಕಂಡು ಬಂದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಆರೋಪಿಗಳು ತಮ್ಮನ್ನು ಲೈಂಗಿಕ ಕಿರುಕುಳದ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ಗುರುವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜೈಲಿಗೆ ಕಳುಹಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.