ಮಣಿಪುರದಲ್ಲಿ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ: 77 ದಿನಗಳ ಬಳಿಕ ಪ್ರಮುಖ ಆರೋಪಿ ಅರೆಸ್ಟ್
Thursday, July 20, 2023
ಇಂಫಾಲ್: ಮಹಿಳೆಯರಿಬ್ಬರನ್ನು ರಸ್ತೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿರುವ ಆಘಾತಕಾರಿ ಪ್ರಕರಣದ ವೀಡಿಯೋ ವೈರಲ್ ಆಗಿ ಭಾರೀ ಖಂಡನೆ ವ್ಯಕ್ತವಾದ ಬೆನ್ನಲ್ಲೇ, ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
ಹಿಂಸಾಚಾರ ಪೀಡಿತ ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಇಬ್ಬರು ಕುಕಿ-ಜೋ ಬುಡಕಟ್ಟು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದೆ. ಈ ಭೀಕರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವೀಡಿಯೋದಲ್ಲಿ ಕಂಡು ಬಂದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮಣಿಪುರದ ಸಿಎಂ, ತಾವು ವೀಡಿಯೊ ನೋಡಿದ್ದೇನೆ. ಇದು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ. ಇಂದು ಬೆಳಗ್ಗೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯನ್ನು ನೀಡುವಂತೆ ರಾಜ್ಯ ಸರ್ಕಾರ ಪ್ರಯತ್ನಿಸುತ್ತದೆ ಎಂದು ಹೇಳಿದ್ದಾರೆ.
ಪ್ರಸ್ತುತ ಸಂಪೂರ್ಣ ತನಿಖೆ ನಡೆಯುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಎಲ್ಲಾ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿರುವ ಮುಖ್ಯಮಂತ್ರಿಗಳು, ನಮ್ಮ ಸಮಾಜದಲ್ಲಿ ಇಂತಹ ಹೇಯ ಕೃತ್ಯಗಳಿಗೆ ಯಾವುದೇ ಸ್ಥಾನವಿಲ್ಲ ಎಂದು ಹೇಳಿದ್ದಾರೆ.