ಜ್ಯೋತಿಷಿಯಾಗಿ ಬದಲಾದ ನಿವೃತ್ತ ಯೋಧನಿಂದ ಅಪ್ರಾಪ್ತೆಗೆ ನಿರಂತರ ಲೈಂಗಿಕ ದೌರ್ಜನ್ಯ : 8ತಿಂಗಳ ಬಳಿಕ ಆರೋಪಿ ಅರೆಸ್ಟ್
ಕೊಟ್ಟಾಯಂ: ಜ್ಯೋತಿಷಿಯಾಗಿರುವ ನಿವೃತ್ತ ಯೋಧನೊಬ್ಬ 15ರ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆಯೊಂದು ಕೇರಳದ ವೈಕೊಮ್ನಲ್ಲಿ ನಡೆದಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಟಿವಿ ಪುರಂ ಮೂಲದ ಸುದರ್ಶನ್ (55) ಬಂಧಿತ ಆರೋಪಿ. 2022ರ ನವೆಂಬರ್ನಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಈಗ ಬಂಧಿಸಲಾಗಿದೆ. ಸಂತ್ರಸ್ತ ಬಾಲಕಿ ದಲಿತ ಸಮುದಾಯಕ್ಕೆ ಸೇರಿದವಳು. ಬಾಲಕಿಯ ಮೇಲೆ ಆರೋಪಿ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದೌರ್ಜನ್ಯದ ಸಂಗತಿ ಬಯಲಿಗೆ ಬರುತ್ತಿದ್ದಂತೆ ಸಂತ್ರಸ್ತೆಯ ಕುಟುಂಬಕ್ಕೆ ಆರೋಪಿ ಕೊಲೆ ಬೆದರಿಕೆ ಹಾಕಿದ್ದ. ಅಲ್ಲದೆ, ಫೋಟೋ ಮತ್ತು ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿದ್ದ. ಈ ಸಂಗತಿಯನ್ನು ತನ್ನ ಫ್ರೆಂಡ್ಸ್ ಮತ್ತು ಕ್ಲಾಸ್ ಟೀಚರ್ಗೆ ಸಂತ್ರಸ್ತೆ ತಿಳಿಸಿದ್ದಳು. ಬಳಿಕ ಶಾಲಾ ಆಡಳಿತ ಮಂಡಳಿ ವೈಕೊಮ್ ಪೊಲೀಸರಿಗೂ ಮತ್ತು ಪರಿಶಿಷ್ಠ ಜಾತಿ ಅಭಿವೃದ್ಧಿ ಇಲಾಖೆಯ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದರು.
ಜುಲೈ 22ರಂದು ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿ, ಪ್ರಕರಣ ದಾಖಲಿಸಿಕೊಂಡರು. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಎಸ್ಕೇಪ್ ಆಗಿದ್ದ. ಇದೀಗ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.