ಆ್ಯಂಬುಲೆನ್ಸ್ ಗೆ ಡಿಕ್ಕಿ ಹೊಡೆದ ಸಚಿವರ ಬೆಂಗಾವಲು ವಾಹನ
Friday, July 14, 2023
ತಿರುವನಂತಪುರಂ: ಕೇರಳದ ಶಿಕ್ಷಣ ಸಚಿವರ ಬೆಂಗಾವಲು ವಾಹನವೊಂದು ಆ್ಯಂಬುಲೆನ್ಸ್‌ಗೆ ಢಿಕ್ಕಿ ಹೊಡೆದು ಆ ಬಳಿಕ ಬೈಕ್ ಒಂದಕ್ಕೆ ಗುದ್ದಿರುವ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
ಕೇರಳ ಸರ್ಕಾರದ ಶಿಕ್ಷಣ ಸಚಿವ ಶಿವನ್‌ಕುಟ್ಟಿ ಅವರ ಬೆಂಗಾವಲು ವಾಹನ ಆ್ಯಂಬುಲೆನ್ಸ್‌ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಖಂಡನೆ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸರ್ಕಲ್ ಒಂದಕ್ಕೆ ಸಚಿವರ ಕಾರು ರಸ್ತೆಯ ಮತ್ತೊಂದು ಬದಿಯಿಂದ ಬರುತ್ತದೆ. ಈ ವೇಳೆ ಮುಂಭಾಗದಿಂದ ರೋಗಿಯನ್ನು ಹೊತ್ತು ಸಾಗುತ್ತಿದ್ದ ಆ್ಯಂಬುಲೆನ್ಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಪಲ್ಟಿಯಾಗುವುದನ್ನು ನೋಡಬಹುದಾಗಿದೆ. ಇದಾದ ಬಳಿಕ ಚಾಲಕ ವಾಹನವನ್ನು ನಿಲ್ಲಿಸಲು ಮುಂದಾಗುವಷ್ಟರಲ್ಲೇ ಮುಂಬದಿ ನಿಂತಿದ್ದ ಬೈಕ್‌ಗೆ ಡಿಕ್ಕಿ ಹೊಡೆಯುತ್ತದೆ.
ಹಿಂಬದಿ ಇದ್ದ ಸಚಿವರ ಕಾರು ಘಟನೆ ನಡೆದ ಬಳಿಕ ನಿಲ್ಲಿಸದೆ ತಮ್ಮ ಪಾಡಿಗೆ ಹೋಗುತ್ತಿರುವುದು ಕಂಡು ಬಂದಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ. ಸಾರ್ವಜನಿಕರ ನೆರವಿನಿಂದ ಆ್ಯಂಬುಲೆನ್ಸ್ ಅನ್ನು ಮೇಲಕ್ಕೆ ಎತ್ತಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.