ಪೊಲೀಸ್ ಎಂದು ಬೆದರಿಕೆಯೊಡ್ಡಿ ಅಪಾರ್ಟ್‌ಮೆಂಟ್ ಮೆಟ್ಟಿಲಲ್ಲೇ ಆಗಂತುಕನಿಂದ ಯುವತಿ ಮೇಲೆ ಅತ್ಯಾಚಾರ: ಆರೋಪಿ ಅರೆಸ್ಟ್
Thursday, July 13, 2023
ನವದೆಹಲಿ: ಪೊಲೀಸ್ ಎಂದು ಬೆದರಿಸಿ ಆಗಂತುಕನೋರ್ವನು ಯುವತಿಯ ಮೇಲೆ ಅಪಾರ್ಟ್‌ಮೆಂಟ್ ಮೆಟ್ಟಿಲ ಬಳಿಯೇ ಅತ್ಯಾಚಾರವೆಸಗಿ ವಿಕೃತಿ ಮೆರೆದಿದ್ದಾನೆ. ಇದೀಗ ಆತನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಜು.7ರ ತಡರಾತ್ರಿ ಯುವತಿ ತನ್ನ ಪ್ರಿಯಕರನೊಂದಿಗೆ ಕಾರಿನಲ್ಲಿ ಕೂತು ಮಾತನಾಡುತ್ತಿದ್ದಳು. ಈ ವೇಳೆ ಕಾರಿನ ಕನ್ನಡಿಯಲ್ಲಿ ಕಾಣುತ್ತಿದ್ದ ಇಬ್ಬರ ಮುಖದ ಫೋಟೋ ಹಾಗೂ ವಿಡಿಯೋವನ್ನು ಆಗಂತುಕನೋರ್ವನು ರಹಸ್ಯವಾಗಿ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ. ಇದಾದ ಬಳಿಕ ಪ್ರಿಯಕರ ಯುವತಿಯನ್ನು ಆಕೆಯ ಅಪಾರ್ಟ್ ಮೆಂಟ್ ಬಳಿ ಬಿಟ್ಟು ಅಲ್ಲಿಂದ ತೆರಳಿದ್ದಾನೆ.
ಈ ವೇಳೆ ಮೊಬೈಲ್ ನಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಿದ್ದ ಆಗಂತುಕ ಯುವತಿಯ ಅಪಾರ್ಟ್ ಮೆಂಟ್ ಹೊರಗೆ ಕಾದು ಕುಳಿತಿದ್ದಾನೆ. ಯುವತಿ ಅಪಾರ್ಟ್ ಮೆಂಟ್ ಒಳಗೆ ಹೋಗುತ್ತಿದ್ದಂತೆ ಆಕೆಯನ್ನು ಹಿಂಬಾಲಿಸಿ ಮೆಟ್ಟಿಲು ಬಳಿ ಆಕೆಯನ್ನು ಹಿಡಿದು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದ ಫೋಟೋ ಹಾಗೂ ವಿಡಿಯೋವನ್ನು ತೋರಿಸಿದ್ದಾನೆ. ಅಲ್ಲದೆ ತಾನು ಪೊಲೀಸ್ ಇದನ್ನು ವೈರಲ್ ಮಾಡುತ್ತೇನೆ ಎಂದು ಆಕೆಯನ್ನು ಬೆದರಿಸಿ ಮೇಲೆ ಅತ್ಯಾಚಾರವೆಸಗಿ ಅಲ್ಲಿಂದ ಪರಾರಿ ಆಗಿದ್ದಾನೆ.
ಯುವತಿ ಪ್ರಿಯಕರನಿಗೆ ಕರೆ ಮಾಡಿ, ಮನೆಯವರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಆರೋಪಿಯ ಸ್ಕೆಚ್ ಬಿಡಿಸಿ ಪೊಲೀಸರು ಪತ್ತೆಗೆ ಮುಂದಾಗಿದ್ದಾರೆ. ಸಿಸಿಟಿವಿಯನ್ನು ಪರಿಶೀಲಿಸಿ, ಸತತ ಹುಡಕಾಟದ ಬಳಿಕ ರವಿ ಸೋಲಂಕಿ ಎಂಬಾತನನ್ನು ಬಂಧಿಸಿದ್ದಾರೆ.