ಮಹಿಳೆ - ಆಕೆಯ ಪುತ್ರಿಯ ಕೂಡಿಹಾಕಿ ಲೈಂಗಿಕ ದೌರ್ಜನ್ಯ : ಕಾಮುಕ ಎರಡನೆಯ ಪತಿ ಅರೆಸ್ಟ್
Friday, July 14, 2023
ಕುಂದಾಪುರ: ಎರಡನೇ ಪತಿಯು ಮಹಿಳೆ ಹಾಗೂ ಆಕೆಯ ಪುತ್ರಿಯನ್ನು ಮನೆಯಲ್ಲಿ ಕೂಡಿಹಾಕಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬೈಂದೂರು ನಿವಾಸಿ ಸೊಹೇಲ್ ಬಂಧಿತ ಆರೋಪಿ.
ಸೊಹೈಲ್ ಪತಿಯನ್ನು ತೊರೆದಿರುವ ಹೊರರಾಜ್ಯದ ಮಹಿಳೆಯೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದ. ಆಕೆಗೆ ಇಬ್ಬರು ಅಪ್ರಾಪ್ತ ವಯಸ್ಕ ಮಕ್ಕಳಿದ್ದರು. ಅವರನ್ನೂ ತನ್ನ ಮನೆಯಲ್ಲಿಯೇ ಇರಿಸಿಕೊಂಡಿದ್ದ. ಸ್ವಲ್ಪ ಕಾಲದ ಬಳಿಕ ಸೊಹೇಲ್ ಮಹಿಳೆಯ ಪುತ್ರಿಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದಾನೆ. ಆದ್ದರಿಂದ ಆಕೆ, ಸೊಹೇಲ್ ನನ್ನು ತೊರೆದು ಬೇರೆಡೆ ಬಾಡಿಗೆ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಾಗಿದ್ದಳು. ಆದರೂ ಬಿಡದ ಸೊಹೇಲ್ ಬಾಡಿಗೆ ಮನೆಯಲ್ಲಿದ್ದ ಮಹಿಳೆ ಹಾಗೂ ಆಕೆಯ ಪುತ್ರಿಯನ್ನು ತನ್ನ ಮನೆಗೆ ಬಲವಂತವಾಗಿ ಕರೆದೊಯ್ದು ಇಬ್ಬರನ್ನೂ ಕೋಣೆಯಲ್ಲಿ ಕೂಡಿ ಹಾಕಿ, ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದನು.
ಬಿಡಿಸಲು ಬಂದ ಬಾಲಕಿಯ ತಾಯಿಗೆ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ. ಆದರೆ ಮಹಿಳೆ ಆರೋಪಿಯನ್ನು ದೂಡಿ, ತನ್ನ ಪುತ್ರಿಯೊಂದಿಗೆ ಆತನಿಂದ ತಪ್ಪಿಸಿಕೊಂಡು ಬಂದಿದ್ದಳು. ಈ ಬಗ್ಗೆ ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಮಹಿಳೆ, ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದಳು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.