ವಿರೋಧದ ನಡುವೆಯೂ ಓಡಿಹೋಗಿ ಮದುವೆಯಾದ ಜೋಡಿಗೆ ಯುವತಿಯ ಸಂಬಂಧಿಕರಿಂದ ಎದುರಾಯ್ತು ಬಿಗ್ ಶಾಕ್
Friday, July 7, 2023
ಹೈದರಾಬಾದ್: ಮನೆಯವರ ವಿರೋಧದ ನಡುವೆಯೂ ಪ್ರಿಯಕರನನ್ನು ಮದುವೆಯಾದ ಪುತ್ರಿಯ ಮೇಲೆ ಆಕ್ರೋಶಗೊಂಡ ತಂದೆ, ತನ್ನ ಸಂಬಂಧಿಕರೊಂದಿಗೆ ಸೇರಿ ಆಕೆಯ ಪ್ರಿಯಕರನ ಮನೆಗೆ ಬೆಂಕಿಯಿಟ್ಟು ಧ್ವಂಸಗೈದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಈ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯ ನರ್ಸಂಪೇಟೆ ಮಂಡಲದ ಇಟಿಕಲಪಲ್ಲಿ ಗ್ರಾಮದಲ್ಲಿ ನಡೆದಿದೆ. ಕಾವ್ಯಾ ಹಾಗೂ ರಂಜಿತ್ ಎಂಬವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಈ ಪ್ರೀತಿಯನ್ನು ಕಾವ್ಯಾ ಪೋಷಕರು ಒಪ್ಪಿರಲಿಲ್ಲ. ವಿರೋಧದ ನಡುವೆಯೂ ಓಡಿ ಹೋಗಿ ರಂಜಿತ್ ಹಾಗೂ ಕಾವ್ಯಾ ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.
ಮದುವೆಯ ಬೆನ್ನಲ್ಲೇ ಸೆಲ್ಫಿ ವಿಡಿಯೋ ಮಾಡಿರುವ ನವಜೋಡಿ, ನಾವಿಬ್ಬರು ಸಂತೋಷದಿಂದ್ದೇವೆ ಎಂದು ತಿಳಿಸಿದ್ದಾರೆ. ಯುವತಿಯ ತಂದೆ ಇಟಿಕಲಪಲ್ಲಿ ಗ್ರಾಮದ ಪಂಚಾಯತ್ ಸದಸ್ಯ. ಮದುವೆ ವಿಚಾರ ತಿಳಿದ ತಕ್ಷಣ ತನ್ನ ಸಂಬಂಧಿಕರೊಂದಿಗೆ ಹೋಗಿ ರಂಜಿತ್ ಮನೆಗೆ ಬೆಂಕಿಯಿಟ್ಟಿದ್ದಾರೆ. ಅಲ್ಲದೆ, ನವಜೋಡಿಯ ಮದುವೆಗೆ ಸಹಾಯ ಮಾಡಿದ ಇತರೆ ನಾಲ್ವರ ಮನೆಗೂ ಬೆಂಕಿ ಇಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಕಾವ್ಯಾ, ನಾವಿಬ್ಬರು ಜೂನ್ 30ರಂದು ಮದುವೆಯಾಗಿದ್ದೇವೆ. ಹೈದರಾಬಾದ್‌ನಲ್ಲಿ ನೆಲೆಸಿದ್ದೇವೆ. ಮೊದಲ ಮದುವೆ ಸಿಂಧುವಾಗಿಲ್ಲ ಎಂದು ಹೇಳಿದ್ದಕ್ಕೆ ಜುಲೈ 4ರಂದು ಮತ್ತೆ ದೇವಸ್ಥಾನಕ್ಕೆ ಬಂದು ಮದುವೆಯಾಗಿದ್ದೇವು. ಬಳಿಕ ನಾವು ಪೊಲೀಸ್ ಠಾಣೆಗೆ ತೆರಳಿದೆವು. ರಕ್ಷಣೆ ಕೋರಿ ಹೋದರೆ, ನಮಗೆ ಆಘಾತ ನೀಡಿದರು. ಎಲ್ಲಾ ಪೊಲೀಸರು ನನ್ನ ತಂದೆಗೆ ಬೆಂಬಲ ನೀಡಿ, ನಮ್ಮನ್ನು ಚೆನ್ನಾಗಿ ಬೈದರು. ನಾವು ಹೇಳುವುದನ್ನು ಕೇಳಿಸಿಕೊಳ್ಳಲೇ ಇಲ್ಲ. ಪೊಲೀಸರು ನನ್ನ ಎಲ್ಲಾ ಚಿನ್ನಾಭರಣವನ್ನು ಕಸಿದುಕೊಂಡಿದ್ದಾರೆ. ಅಲ್ಲದೆ, ನನ್ನ ತಂದೆಯ ಸ್ನೇಹಿತರು ಮತ್ತು ಸಂಬಂಧಿಕರೆಲ್ಲರೂ ನಮ್ಮನ್ನು ಕೊಲ್ಲುತ್ತಾರೆ ಮತ್ತು ಅವರು ನಮ್ಮನ್ನು ಬದುಕಲು ಬಿಡುವುದಿಲ್ಲ ಎಂದು ಆರೋಪಿಸಿದ್ದಾರೆ.
ಈ ಪ್ರಕರಣ ಬಗ್ಗೆ ಮಾತನಾಡಿರುವ ಎಸಿಪಿ ಸಂಪತ್ ರಾವ್, ಯುವಕನ ಮನೆಯ ಮೇಲೆ ದಾಳಿ ಮಾಡಿ, ಬೆಂಕಿಯಿಟ್ಟವರ ವಿರುದ್ಧ ನಾವು ಪ್ರಕರಣ ದಾಖಲಿಸಿದ್ದೇವೆ. ಯುವತಿಯ ಚಿಕ್ಕಪ್ಪ ಮತ್ತು ಇತರರು ಸೇರಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಎಲ್ಲರ ವಿರುದ್ಧವೂ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.