-->
ಪತಿ - ಪತ್ನಿಯರ ನಡುವೆ ಜಗಳ: ಸಮಸ್ಯೆ ಪರಿಹಾರಕ್ಕೆ ಜ್ಯೋತಿಷಿ ಮೊರೆ ಹೋದವರಿಗೆ ಕಾದಿತ್ತು ಬಿಗ್ ಶಾಕ್

ಪತಿ - ಪತ್ನಿಯರ ನಡುವೆ ಜಗಳ: ಸಮಸ್ಯೆ ಪರಿಹಾರಕ್ಕೆ ಜ್ಯೋತಿಷಿ ಮೊರೆ ಹೋದವರಿಗೆ ಕಾದಿತ್ತು ಬಿಗ್ ಶಾಕ್

ಬೆಂಗಳೂರು: ನಗರದ ಯಲಹಂಕ ನಿವಾಸಿ ಕುಟಂಬವೊಂದು ಜ್ಯೋತಿಷಿಯೊಬ್ಬನ ಮಾತನ್ನು ನಂಬಿ ಚಿನ್ನಾಭರಣದೊಂದಿಗೆ ಹಣವನ್ನೂ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಘಟನೆಯ ವಿವರಣೆಗೆ ಬರುವುದಾದರೆ ಯಲಹಂಕ ನಿವಾಸಿ ಇಂದಿರಾ ಎಂಬವರ ಪುತ್ರ ಹಾಗೂ ಅಳಿಯನ ನಡುವೆ ಆಗಾಗ ಜಗಳವಾಗುತ್ತಿತ್ತು. ಕುಟುಂಬದಲ್ಲಿ ನೆಮ್ಮದಿಯಿಲ್ಲವೆಂದು ಹೊಸಪೇಟೆ ಮೂಲದ ಜ್ಯೋತಿಷಿ ಸುರೇಶ್‌ ಪಾಟೀಲ್ ಮೊರೆ ಹೋಗಿದ್ದರು. ಈ ವೇಳೆ ಎಲ್ಲವನ್ನೂ ಸರಿ ಮಾಡುತ್ತೇನೆ ಎಂದು ಬೆಂಗಳೂರಿನ ಯಲಹಂಕ ಮನೆಗೆ ಜ್ಯೋತಿಷಿ ಭೇಟಿ ನೀಡಿದ್ದ.

ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನಗಳಲ್ಲಿ ವಿಶೇಷ ಪೂಜೆ ಮಾಡಬೇಕೆಂದು ಹೇಳಿ ಜ್ಯೋತಿಷಿ ಕುಟುಂಬಸ್ಥರನ್ನು ದೇವಸ್ಥಾನಕ್ಕೆ ಕಳುಹಿಸಿದ್ದ. ಅತ್ತ ಕುಟುಂಬಸ್ಥರು ದೇವಸ್ಥಾನಕ್ಕೆ ತೆರಳುತ್ತಿದ್ದಂತೆ ಇತ್ತ ಜ್ಯೋತಿಷಿ ಮನೆಯ ಬೀರುವಿನಲ್ಲಿದ್ದ ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜತೆಗೆ ಹಣವನ್ನು ಕದ್ದು ಆ ಜಾಗದಲ್ಲಿ ನಿಂಬೆಹಣ್ಣು ಇಟ್ಟಿದ್ದ.

ದೇವಸ್ಥಾನದಿಂದ ವಾಪಸ್​ ಮನೆಗೆ ಬಂದ ಕುಟುಂಬಕ್ಕೆ ಬೀರು ಬಾಗಿಲು ತೆಗೆಯುವಂತೆ ಜ್ಯೋತಿಷಿಯೇ ಸೂಚನೆ ನೀಡಿದ್ದ. ಬಾಗಿಲು ತೆಗೆದ ಕೂಡಲೇ ಅದರಲ್ಲಿದ್ದ ಚಿನ್ನಾಭರಣ ಹಾಗೂ ಹಣ ಕಳುವಾಗಿ, ಆ ಜಾಗದಲ್ಲಿ ನಿಂಬೆಹಣ್ಣು ಇರುವುದನ್ನು ನೋಡಿ ಕುಟುಂಬಸ್ಥರು ಶಾಕ್ ಆದರು.

ಇದಾದ ಬಳಿಕ ಮತ್ತೊಂದು ವರಸೆ ತೆಗೆದ ಜ್ಯೋತಿಷಿ, ಇದೆಲ್ಲ ನಿಮ್ಮ ಬೀಗರ ಮನೆಯವರೇ ಮಾಡಿರುವ ಕೆಲಸ ಎಂದು ಹೇಳಿದ್ದಾನೆ. ಚಿಂತಿಸಬೇಡಿ ಕಳ್ಳತನ ಮಾಡಿರುವ ಎಲ್ಲವನ್ನು ನಾನು ವಾಪಸ್ ತರಿಸುತ್ತೇನೆ ಎಂದು ಹೇಳಿ ಕುಟುಂಬಸ್ಥರಿಂದ ಮತ್ತೆ ಹಣ ಪಡೆದುಕೊಂಡಿದ್ದಾನೆ. ತನಗೆ ಎರಡು ಅಮಾವಾಸ್ಯೆ ಸಮಯ ಕೊಡಿ ಎಂದು ಹೇಳಿ ಹಣ, ಚಿನ್ನಾಭರಣ ಸಮೇತ ಎಸ್ಕೇಪ್ ಆಗಿದ್ದಾನೆ.

ಜ್ಯೋತಿಷಿಯನ್ನು ನಂಬಿ ವಂಚನೆಗೆ ಒಳಗಾಗಿರುವ ಕುಟುಂಬ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಈ ಘಟನೆ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯಕ್ಕೆ ಜ್ಯೋತಿಷಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ

Ads on article

Advertise in articles 1

advertising articles 2

Advertise under the article