ಬೆಕ್ಕಿನ ಮರಿಗಳೆಂದು ಎರಡು ಚಿರತೆ ಮರಿಗಳನ್ನು ಮನೆಗೆ ಕೊಂಡೊಯ್ದ ರೈತ ಕುಟುಂಬ
Sunday, July 16, 2023
ಹರಿಯಾಣ: ತಾಯಿ ಚಿರತೆಯಿಂದ ಬೇರ್ಪಟ್ಟ ಎರಡು ಚಿರತೆ ಮರಿಗಳನ್ನು ಬೆಕ್ಕಿನ ಮರಿಗಳೆಂದು ರೈತರೊಬ್ಬರು ಮನೆಗೆ ತಂದ ವಿಚಿತ್ರ ಘಟನೆ ಹರಿಯಾಣದಲ್ಲಿ ನಡೆದಿದೆ.
ಹರಿಯಾಣದ ನೂಹ್ ಜಿಲ್ಲೆಯ ಕೋಟಾ ಗ್ರಾಮದಲ್ಲಿ ರೈತರ ಕುಟುಂಬವೊಂದು ದನ ಮೇಯಿಸಲು ಹೋಗಿತ್ತು. ಈ ವೇಳೆ ಸಮೀಪದ ಅರಣ್ಯ ಪ್ರದೇಶದಲ್ಲಿ ಚಿರತೆ ಮರಿಗಳೆರಡು ಅವರ ಕಣ್ಣಿಗೆ ಬಿದ್ದಿದೆ. ಅವುಗಳನ್ನು ಬೆಕ್ಕಿನ ಮರಿಗಳೆಂದು ಭಾವಿಸಿದ್ದ ರೈತರು ಮನೆಗೆ ತಂದಿದ್ದಾರೆ.
ಮನೆಯಲ್ಲಿ ಅವುಗಳಿಗೆ ಹಾಲು ಕುಡಿಸಿ ಲಾಲನೆ ಪಾಲನೆಮಾಡಿ ಪೋಷಿಸಿದ್ದಾರೆ. ಆದರೆ ಈ ಮರಿಗಳನ್ನು ನೋಡಿದ ಗ್ರಾಮಸ್ಥರಲ್ಲೊಬ್ಬರು ಈ ಮರಿಗಳು ಬೆಕ್ಕಿನದ್ದಲ್ಲ ಚಿರತೆಯದ್ದು ಎಂದು ಕಂಡುಹಿಡಿದಿದ್ದಾರೆ. ಈ ವಿಚಾರ ತಿಳಿದ ತಕ್ಷಣ ಮರಿಗಳನ್ನು ಸುರಕ್ಷಿತವಾಗಿ ಮನೆಯಲ್ಲೇ ಇರಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಮರಿಗಳನ್ನು ಒಯ್ದಿದ್ದಾರೆ. ನಂತರ ಮರಿಗಳನ್ನು ತಾಯಿ ಚಿರತೆಯ ಬಳಿಗೆ ಬಿಡಲಾಗಿದೆ.