ಬಂಟ್ವಾಳ: ಗುಡ್ಡಕುಸಿತಗೊಂಡು ಮಣ್ಣಿನಡಿ ಸಿಲುಕಿ ತಾಯಿ ಸಾವು ಪುತ್ರಿಯ ರಕ್ಷಣೆ
Friday, July 7, 2023
ಬಂಟ್ವಾಳ: ಇಲ್ಲಿನ ಮುನ್ನೂರು ಗ್ರಾಮದ ನಂದಾವರ ಗುಂಪು ಮನೆ ಎಂಬಲ್ಲಿ ಬೆಳ್ಳಂಬೆಳಗ್ಗೆ ಆರು ಗಂಟೆ ಸುಮಾರಿಗೆ ಏಕಾಏಕಿ ಗುಡ್ಡ ಕುಸಿದು ಮನೆಯ ಮೇಲೆಯೇ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು ಗಾಯಾಳುವಾಗಿರುವ ಅವರ ಪುತ್ರಿಯನ್ನು ರಕ್ಷಿಸಿರುವ ಘಟನೆ ನಡೆದಿದೆ.
ಇಲ್ಲಿನ ಮುಹಮ್ಮದ್ ಎಂಬವರ ಪತ್ನಿ ಝರೀನಾ(47) ಮೃತಪಟ್ಟವರು. ಅವರ ಪುತ್ರಿ ಸಫಾ(20) ಎಂಬವರನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ ಇನ್ನಿಬ್ಬರನ್ನು ರಕ್ಷಿಸಲಾಗಿದೆ.
ಕಳೆದ ನಾಲ್ಕು ದಿನಗಳಿಂದ ದ.ಕ.ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಪರಿಣಾಮ ಇಂದು ಬೆಳಗ್ಗೆ 6 ಗಂಟೆ ವೇಳೆಗೆ ಮುಹಮ್ಮದ್ ಅವರ ಮನೆ ಸಮೀಪದ ಗುಡ್ಡವೊಂದು ಏಕಾಏಕಿ ಕುಸಿದು ಮನೆಯ ಮೇಲೆಯೇ ಬಿದ್ದಿದೆ. ಈ ವೇಳೆ ಮನೆಯೊಳಗಿದ್ದ ಝರೀನಾ ಮತ್ತು ಸಫಾ ಕುಸಿದ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದರು. ತಕ್ಷಣ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಣಾ ಕಾರ್ಯ ಕೈಗೊಂಡರೂ ಅಷ್ಟರಲ್ಲಿ ಝರೀನಾ ಕೊನೆಯುಸಿರೆಳೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳು ಸಫಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಟ್ವಾಳ ಅಗ್ನಿಶಾಮಕ ಅಧಿಕಾರಿಗಳು, ಪೊಲೀಸರು, ತಾಲೂಕು ಆಡಳಿತದ ಸಿಬಂದಿ ಸ್ಥಳದಲ್ಲಿ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಸ್ಥಳದಲ್ಲಿದ್ದಾರೆ.