-->
ಗೃಹಲಕ್ಷ್ಮೀ ಯೋಜನೆಯಡಿ ನೋಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿ ಕರೆ

ಗೃಹಲಕ್ಷ್ಮೀ ಯೋಜನೆಯಡಿ ನೋಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿ ಕರೆ


ಮಂಗಳೂರು:- ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಯ ಹೆಸರು ನೋಂದಣಿ ಕಾರ್ಯ ಆರಂಭಗೊಂಡಿದ್ದು, ಜಿಲ್ಲೆಯ ಎಲ್ಲ ಅರ್ಹರು ಈ ಯೋಜನೆಯಡಿ ನೋಂದಾಯಿಸಿಕೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಕರೆ ನೀಡಿದ್ದಾರೆ.


ಈಗಾಗಲೇ ತಿಳಿಸಿರುವಂತೆ ಪಡಿತರ ಚೀಟಿಯಲ್ಲಿ "ಯಜಮಾನಿ ಮಹಿಳೆ” ಎಂದು ಗುರುತಿಸಿರುವ ಮಹಿಳೆಯು ಈ ಯೋಜನೆಯ ಫಲಾನುಭವಿಯಾಗುತ್ತಾರೆ. ಆದರೆ ಫಲಾನುಭವಿ ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿ.ಎಸ್.ಟಿ. ಪಾವತಿದಾರರಾಗಿರತಕ್ಕದ್ದಲ್ಲ.
 ಫಲಾನುಭವಿಯು ನೋಂದಣಿಯನ್ನು 3 ವಿಧಾನದಿಂದ ಮಾಡಿಸಬಹುದಾಗಿದೆ. 


ಮೊದಲನೆಯದಾಗಿ ಈಗಾಗಲೇ ರೇಷನ್ ಕಾರ್ಡಿನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ ಹಾಗೂ ನೊಂದಾವಣಿ ಮಾಡಿಸುವ ಸ್ಥಳದ ವಿವರಗಳನ್ನು ಎಸ್‍ಎಂಎಸ್ ಮೂಲಕ ತಿಳಿಸಲಾಗುವುದು.


ಗ್ರಾಮಾಂತರ ಪ್ರದೇಶದಲ್ಲಿ ಅವರು ವಾಸಿಸುವ ಗ್ರಾಮದ ಸಮೀಪವಿರುವ ಗ್ರಾಮ-ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರವಾಗಿರುತ್ತದೆ. ಹಾಗೆಯೇ ನಗರ ಪ್ರದೇಶದಲ್ಲಿ ಅವರ ಸಮೀಪವಿರುವ ಕರ್ನಾಟಕ-ಒನ್ ಮತ್ತು ಸ್ಥಳೀಯ ನಗರಾಡಳಿತ ಸಂಸ್ಥೆಯ ಕಚೇರಿಗಳು ಕೇಂದ್ರವಾಗಿರುತ್ತದೆ. ಪರ್ಯಾಯವಾಗಿ "ಪ್ರಜಾಪ್ರತಿನಿಧಿ” (ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂಸೇವಕರು) ತಮ್ಮ ಮನೆಗೆ ಭೇಟಿ ನೀಡಿದಾಗ ಅವರಿಂದಲೂ ಸಹ ನೋಂದಾಯಿಸಿ ಕೊಳ್ಳಬಹುದು. 

ಪ್ರತಿ ಫಲಾನುಭವಿಯ ನೊಂದಾವಣಿಗೆ ನಿಗದಿಮಾಡಿರುವ ದಿನಾಂಕ, ಸಮಯ ಮತ್ತು ಸ್ಥಳವನ್ನು 1902 ಗೆ ಕಾಲ್ ಮಾಡಿ ಅಥವಾ 8147500500 ನಂಬರ್‍ಗೆ ಎಸ್‍ಎಂಎಸ್ ಮೂಲಕ ಸಂದೇಶ ಕಳುಹಿಸಿ ಮಾಹಿತಿ ಪಡೆಯಬಹುದಾಗಿದೆ. ಒಂದು ವೇಳೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು ಗ್ರಾಮ- ಒನ್/ಬಾಪೂಜಿ ಕೇಂದ್ರ/ಕರ್ನಾಟಕ-ಒನ್ ಕೇಂದ್ರಗಳಿಗೆ ಹೋಗಲು ಸಾಧ್ಯವಾಗದೇ ಇದ್ದಲ್ಲಿ ಅದೇ ಸೇವಾ ಕೇಂದ್ರಗಳಿಗೆ ಮುಂದಿನ ಯಾವುದೇ ದಿನಾಂಕದಂದು ಸಂಜೆ 5 ರಿಂದ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದಾಗಿದೆ.


ಈ ಯೋಜನೆಯಡಿ ನೊಂದಾಯಿಸಿಕೊಳ್ಳಲು ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್, ಸಂಖ್ಯೆ ಪತಿಯ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಪಾಸ್ ಬುಕ್(ಆಧಾರ್ ನಂಬರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹೊರತುಪಡಿಸಿ ಪರ್ಯಾಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಬಯಸಿದಲ್ಲಿ ಆ ಬ್ಯಾಂಕ್ ಖಾತೆಯ ಪಾಸ್ ಬುಕ್) ಮಾಹಿತಿ ಅಗತ್ಯವಿರುತ್ತದೆ. ನೋಂದಣಿಗೆ ನಿಗದಿಪಡಿಸಿದ ದಿನಾಂಕದಂದು ಈ ಎಲ್ಲಾ ದಾಖಲಾತಿಗಳೊಂದಿಗೆ ಫಲಾನುಭವಿಗಳು ಕೇಂದ್ರಕ್ಕೆ ಹಾಜರಾಗಬೇಕು.

ಗ್ರಾಮ್-ಒನ್ / ಬಾಪೂಜಿಕೇಂದ್ರ / ಕರ್ನಾಟಕ-ಒನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಾಗ ಮಂಜೂರಾತಿ ಪತ್ರವನ್ನು ನೀಡಲಾಗುವುದು. ಪ್ರಜಾಪ್ರತಿನಿಧಿ ಮೂಲಕ ನೋಂದಾಯಿಸಿಕೊಂಡಲ್ಲಿ ಮಂಜೂರಾತಿ ಪತ್ರವನ್ನು ತದನಂತರ ತಮ್ಮ ಮನೆಗೆ ತಲುಪಿಸಲಾಗುವುದು.

ಮೇಲಿನಂತೆ ಪ್ರಜಾಪ್ರತಿನಿಧಿ ಮೂಲಕ ಅಥವಾ ಗ್ರಾಮ್-ಒನ್/ ಬಾಪೂಜಿಕೇಂದ್ರ/ ಕರ್ನಾಟಕ-ಒನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಲ್ಲಿ, ಅರ್ಜಿದಾರರು ನೀಡಿದ ಮೊಬೈಲ್ ಸಂಖ್ಯೆಗೆ ಎಸ್‍ಎಂಎಸ್ ಮೂಲಕ ಮಂಜೂರಾತಿ ಬಗ್ಗೆ ಸಂದೇಶ ರವಾನಿಸಲಾಗುವುದು. ಒಂದು ವೇಳೆ ಫಲಾನುಭವಿಯು ಗ್ರಾಮ್-ಒನ್ / ಬಾಪೂಜಿಕೇಂದ್ರ / ಕರ್ನಾಟಕ-ಒನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿದಲ್ಲಿ, ಆನಂತರ ಪ್ರಜಾಪ್ರತಿನಿಧಿ ಅವರ ಮನೆಗೆ ಭೇಟಿ ನೀಡಿ ನೋಂದಾಯಿಸಲು ಪ್ರಯತ್ನಿಸಿದರೆ ಈಗಾಗಲೇ ನೋಂದಾಯಿಸಿರುವ ಮಾಹಿತಿ ವ್ಯಕ್ತವಾಗುತ್ತದೆ.

ಈಗಾಗಲೇ ಆಧಾರ್ ಜೋಡಣೆಯಾಗಿರುವ ಫಲಾನುಭವಿಯ ಖಾತೆಗೆ ಮಾಹೆಯಾನ ರೂ.2000/-ಗಳನ್ನು ಡಿ.ಬಿ.ಟಿ. ಮೂಲಕ ಜಮೆ ಮಾಡಲಾಗುವುದು. ಒಂದು ವೇಳೆ ಫಲಾನುಭವಿಗಳು ಇಚ್ಚಿಸಿದಲ್ಲಿ ಪರ್ಯಾಯ ಬ್ಯಾಂಕ್ ಖಾತೆಯನ್ನು ನೀಡಬಹುದಾಗಿರುತ್ತದೆ. ಆ ಬ್ಯಾಂಕ್ ಖಾತೆಗೆ ಮಾಹೆಯಾನ ರೂ.2000/-ಗಳನ್ನು ಆರ್.ಟಿ.ಜಿ.ಎಸ್. ಮೂಲಕ ಜಮೆ ಮಾಡಲಾಗುವುದು. ಈ ಯೋಜನೆಯಡಿ ಫಲಾನುಭವಿಯು ಯಾವುದೇ ಶುಲ್ಕವನ್ನು ಪಾವತಿಸತಕ್ಕದ್ದಲ್ಲ. ಈ ಯೋಜನೆಯಡಿ ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿರುತ್ತದೆ.

ಈ ಯೋಜನೆಯಡಿ ಯಾವುದೇ ಅಂತಿಮ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿರುವುದಿಲ್ಲ. ಆದ್ದರಿಂದ ಒಂದು ವೇಳೆ ನಿಗದಿತ ದಿನಾಂಕ / ಸಮಯಕ್ಕೆ ನೋಂದಾಯಿಸಿಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ ಮುಂದೆ ಯಾವುದೇ ದಿನಾಂಕ / ಸಮಯದಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.

ಈ ಯೋಜನೆ ಅನುಷ್ಠಾನ ಕುರಿತಂತೆ ಯಾವುದೇ ರೀತಿಯ ಸುಳ್ಳು ಸುದ್ದಿಗಳು ಹಾಗೂ ನಕರಾತ್ಮಕ ಪ್ರಚಾರಕ್ಕೆ ಕಿವಿಗೊಡದಂತೆ ಹಾಗೂ ಗೃಹಲಕ್ಷ್ಮೀ ಯೋಜನೆ ಕುರಿತು ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳಿಗೆ ಉಚಿತ ಸಹಾಯವಾಣಿ ಸಂಖ್ಯೆ 1902ಗೆ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯ ವರೆಗೆ ಕರೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article