ತಿರುಪತಿ ಬಳಿ ಜಲಪಾತಕ್ಕೆ ಧುಮುಕಿದ ಮಂಗಳೂರು ಮೂಲದ ವಿದ್ಯಾರ್ಥಿ ಮತ್ಯು
Monday, July 3, 2023
ಚೆನ್ನೈ: ತಿರುಪತಿ ಬಳಿ ಇರುವ ತಲಕೋನಾ ಜಲಪಾತಕ್ಕೆ ಪ್ರವಾಸಕ್ಕೆಂದು ಹೋಗಿದ್ದ ಚೆನ್ನೈನಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದ ಮಂಗಳೂರು ಮೂಲದ ವಿದ್ಯಾರ್ಥಿಯೊಬ್ಬನು ರೀಲ್ಸ್ ಮಾಡಲು ಹೋಗಿ ಜೀವಕ್ಕೇ ಕುತ್ತು ತಂದಿರುವ ಘಟನೆ ನಡೆದಿದೆ.
ಚೆನ್ನೈನ ರಾಜೀವ್ ಗಾಂಧಿ ಕಾಲೇಜಿನಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದ ಸುಮಂತ್(22) ಮೃತಪಟ್ಟ ವಿದ್ಯಾರ್ಥಿ.
ಸುಮಂತ್ ತನ್ನ ಸ್ನೇಹಿತರೊಂದಿಗೆ ತಿರುಪತಿ ಬಳಿಯ ತಲಕೋನಾ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದರು. ಶುಕ್ರವಾರ ಸಂಜೆ ನೀರಾಟ ಆಡುತ್ತಿದ್ದ ಸುಮಂತ್ ನೀರಿಗೆ ಜಿಗಿಯಲು ಹೋಗಿದ್ದಾರೆ. ಅಲ್ಲದೆ, ತಾನು ನೀರಿಗೆ ಹಾರುವುದನ್ನು Instagram ರೀಲ್‌ಗಾಗಿ ವೀಡಿಯೊ ಮಾಡುವಂತೆ ಸ್ನೇಹಿತರಿಗೆ ಹೇಳಿದ್ದರು ಎನ್ನಲಾಗಿದೆ. ಅದರಂತೆ ಅವರ ಸ್ನೇಹಿತರು ಕ್ಯಾಮರಾದಲ್ಲಿ ವೀಡಿಯೋ ಮಾಡುತ್ತಿದ್ದರೆ, ಸುಮಂತ್ ಬಂಡೆಯ ಮೇಲಿನಿಂದ ಹತ್ತಡಿ ಆಳದ ನೀರಿಗೆ ಹಾರಿದ್ದಾರೆ.
ಜಲಪಾತಕ್ಕೆ ಹಾರಿದ ಬಳಿಕ ಸುಮಂತ್ ನೀರಿನಿಂದ ಮೇಲಕ್ಕೆ ಬಂದಿರಲಿಲ್ಲ. ಇದರಿಂದ ಭೀತಿಗೊಳಗಾದ ಸ್ನೇಹಿತರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿ ರಾತ್ರಿ ವೇಳೆಗೆ ಸುಮಂತ್ ಮೃತದೇಹ ನೀರಿನಾಳದಲ್ಲಿ ಬಂಡೆಗಳ ನಡುವೆ ಸಿಲುಕಿದ್ದನ್ನು ಪತ್ತೆ ಮಾಡಿದ್ದಾರೆ. ಶನಿವಾರ ಬೆಳಗ್ಗೆ ಸುಮಂತ್ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಲಾಗಿದೆ. ಸುಮಂತ್ ತಲೆ ಎರಡು ಬಂಡೆ ಕಲ್ಲುಗಳ ನಡುವೆ ಸಿಲುಕಿಕೊಂಡಿದ್ದರಿಂದ ಅವರು ನೀರಿನಿಂದ ಬರಲಾಗದೆ ಸಿಕ್ಕಿಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.