-->
ಸಣ್ಣತಪ್ಪಿನ ಪ್ರಮಾದದಿಂದ ಪ್ರಾಣವನ್ನೇ ಕಳೆದುಕೊಂಡ ವಿದ್ಯಾರ್ಥಿನಿ - ಸಣ್ಣ ಸುಳಿವು ನೀಡಿದ್ದರೂ ಉಳಿಯುತ್ತಿತ್ತು ಜೀವ

ಸಣ್ಣತಪ್ಪಿನ ಪ್ರಮಾದದಿಂದ ಪ್ರಾಣವನ್ನೇ ಕಳೆದುಕೊಂಡ ವಿದ್ಯಾರ್ಥಿನಿ - ಸಣ್ಣ ಸುಳಿವು ನೀಡಿದ್ದರೂ ಉಳಿಯುತ್ತಿತ್ತು ಜೀವ


ಆಲಪ್ಪುಳ: ವಿಷಕಾರಿ ಹಣ್ಣು ತಿಂದು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ದುರಂತವಾಗಿ ಮೃತಪಟ್ಟ ಹೃದಯವಿದ್ರಾವಕಾರಿ ಘಟನೆ ಕೇರಳ ಆಲಪ್ಪುಳದಲ್ಲಿ ನಡೆದಿದೆ.

ಆಲಪ್ಪುಳದ ಕನ್ನಂಚೇರಿಯ ಕರುವಟ್ಟ ನಿವಾಸಿ, 9ನೇ ತರಗತಿ ವಿದ್ಯಾರ್ಥಿನಿ ವೀಣಾ (14) ಮೃತಪಟ್ಟ ಬಾಲಕಿ.   ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಮೊದಲು ಹರಿಪ್ಪಾದ್​ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಕೆ ವಿಷಕಾರಿ ಹಣ್ಣನ್ನು ತಿಂದಿರುವ ಬಗ್ಗೆ ಯಾವುದೇ ಸುಳಿವನ್ನು ನೀಡಲಿಲ್ಲ.

ಹಣ್ಣು ತಿಂದಿದ್ದರ ಬಗ್ಗೆ ಹೇಳಿದ್ದರೆ ಸೂಕ್ತ ಚಿಕಿತ್ಸೆಯನ್ನು ನೀಡಿ ಬಾಲಕಿಯನ್ನು ಉಳಿಸಬಹುದಾಗಿತ್ತು. ಆದರೆ, ವೀಣಾ ವೈದ್ಯರಲ್ಲಿ ಯಾವುದೇ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಮೂಲ ಅರಿಯದೆ ವೈದ್ಯರು ಆಕೆಗೆ ಸಾಮಾನ್ಯ ಚಿಕಿತ್ಸೆ ನೀಡಿ ವಾಪಸ್​ ಕಳುಹಿಸಿದ್ದಾರೆ.

ಇದಾದ ಮಾರನೇ ದಿನ ವೀಣಾ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಮತ್ತೆ ಆಕೆಯನ್ನು ವಂದಾನಂ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ವೀಣಾ ತಾನು ವಿಷಯುಕ್ತ ಹಣ್ಣು ತಿಂದಿರುವುದಾಗಿ ಬಹಿರಂಗಪಡಿಸಿದ್ದಾಳೆ. ಆದರೆ, ಅಷ್ಟರಲ್ಲಾಗಲೇ ತಡವಾಗಿದ್ದು, ಚಿಕಿತ್ಸೆ ನೀಡಿದರೂ ವೀಣಾ ಬದುಕುಳಿಯಲಿಲ್ಲ.

ವೈದ್ಯರ ಬಳಿ ಏನನ್ನು ಮುಚ್ಚಿಡಬಾರದು ಎಂದು ಹೇಳುವುದು ಇದೇ ಕಾರಣಕ್ಕೆ. ವೀಣಾ ಮೊದಲೇ ತಾನು ವಿಷಯುಕ್ತ ಹಣ್ಣನ್ನು ಸೇವಿಸಿದ್ದೇನೆ ಎಂದು ಹೇಳಿದ್ದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆತು ಆಕೆಯ ಪ್ರಾಣ ಉಳಿಯುತ್ತಿತ್ತು. ಆದರೆ, ಆಕೆ ಮಾಡಿದ ಒಂದು ಸಣ್ಣ ಪ್ರಮಾದ ಇದೀಗ ಆಕೆಯ ಪ್ರಾಣವನ್ನು ಕಸಿದುಕೊಂಡಿದೆ. ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. 

Ads on article

Advertise in articles 1

advertising articles 2

Advertise under the article