ಮಂಗಳೂರಿನ ಎ ಜೆ ಆಸ್ಪತ್ರೆಯಲ್ಲಿ ಬಾಣಂತಿ ಸಾವು- ಆಸ್ಪತ್ರೆ ವಿರುದ್ದ ಪ್ರತಿಭಟನೆ
Wednesday, July 26, 2023
ಮಂಗಳೂರು : ಮಂಗಳೂರಿನ ಎ ಜೆ ಆಸ್ಪತ್ರೆ ನಿರ್ಲಕ್ಷ್ಯದಿಂದ ಬಾಣಂತಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆ ಮುಂದೆ ಮಹಿಳೆ ಕುಟುಂಬಸ್ಥರು, ವಿಶ್ವಕರ್ಮ ಸಮುದಾಯದ ಪ್ರತಿನಿಧಿಗಳ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಆಂಬುಲೆನ್ಸಲ್ಲಿ ಶವ ಮುಂದಿಟ್ಟು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜುಲೈ 2 ರಂದು ಈ ಆಸ್ಪತ್ರೆಗೆ ದಾಖಲಾಗಿದ್ದ ಮೂಡುಬಿದ್ರೆಯ ಶಿಲ್ಪ ಆಚಾರ್ಯ ಎಂಬ ಮಹಿಳೆ ಸಾವನ್ನಪ್ಪಿದ್ದರು. 25 ದಿನಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶಿಲ್ಪ ಆಚಾರ್ಯ ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾರೆ.
ಪರೀಕ್ಷೆ ನಡೆಸುತ್ತಿದ್ದ ವೈದ್ಯರು ಆದಿತ್ಯವಾರ ರಜೆಯೆಂದು ಹೆರಿಗೆ ನಡೆಸಲು ಬಾರದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂಬುದು ಕುಟುಂಬದ ಆರೋಪ . ಮಹಿಳೆಗೆ ಡ್ಯೂಟಿ ಡಾಕ್ಟರ್ ಹೆರಿಗೆ ನಡೆಸಿದ್ದರು. ಮಗುವಿಗೆ ಜನ್ಮವಿತ್ತ ಮಹಿಳೆ ಕೋಮಾಕ್ಕೆ ಜಾರಿ ಚಿಕಿತ್ಸೆ ಪಡೆಯುತ್ತಿದ್ದರು.
ಜುಲೈ 25ರಂದು ಮಹಿಳೆ ಸಾವನ್ನಪ್ಪಿದ್ದು ,ಆರೋಗ್ಯದಿಂದಿದ್ದ ಮಹಿಳೆ ವೈದ್ಯರ ನಿರ್ಲಕ್ಷ್ಯದಿಂದಲೇ ಸಾವಾಗಿದ್ದಾಗಿ ಆಕ್ರೋಶ ವ್ಯಕ್ತವಾಗಿದೆ.
ಎ ಜೆ ಆಸ್ಪತ್ರೆ ಮುಂದೆ ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ತೀವ್ರ ಜಟಾಪಟಿ ನಡೆಯಿತು. ಆಸ್ಪತ್ರೆ ಮುಖ್ಯಸ್ಥರು ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಕಾರರು ಪಟ್ಟು ಹಿಡಿದರು.
ಆಸ್ಪತ್ರೆಯ ಶವಗಾರದಲ್ಲಿದ್ದ ಮಹಿಳೆಯ ಮೃತದೇಹವನ್ನು ಪೋಸ್ಟ್ ಮಾರ್ಟಂ ಗೆ ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಪ್ರತಿಭಟನಕಾರರು ಆ್ಯಂಬುಲೆನ್ಸ್
ತಡೆದು ಆಸ್ಪತ್ರೆ ಬಳಿ ನಿಲ್ಲಿಸಿ ಪ್ರತಿಭಟಿಸಿದರು. ಆದರೆ ಪೊಲೀಸರು ಆ್ಯಂಬುಲೆನ್ಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು.