ಬೆಳ್ತಂಗಡಿ: ನಮ್ಮೊಂದಿಗಿನ ಅವರ ಶತ್ರುತ್ವಕ್ಕೆ ಕಾರಣವೇನೆಂಬುದೇ ಇರುವ ಸಮಸ್ಯೆ - ಡಾ.ಡಿ.ವೀರೇಂದ್ರ ಹೆಗ್ಗಡೆ
Wednesday, July 19, 2023
ಮಂಗಳೂರು: ಸೌಜನ್ಯಾ ಅತ್ಯಾಚಾರ, ಕೊಲೆಯ ಹಿಂದೆ ಧರ್ಮಸ್ಥಳ ಕ್ಷೇತ್ರದ ಹೆಸರು ಥಳುಕು ಹಾಕಿಕೊಂಡಿದೆ. ಆದರೆ ನನಗೆ ಯಾವುದೇ ಭಯ, ಸಂಕೋಚ ಹಾಗೂ ಸಂದೇಹವೂ ಇಲ್ಲ. ಆದರೆ ಅವರಿಗೆ ನಮ್ಮೊಂದಿಗಿನ ಶತ್ರುತ್ವಕ್ಕೆ ಕಾರಣವೇನು ಅನ್ನೋದೇ ನಮಗೆ ಇರುವ ಸಮಸ್ಯೆ. ಆದರೆ ನಮ್ಮ ಸಿಬ್ಬಂದಿಗಳಿಗೆ ಈ ಸತ್ಯ ಗೊತ್ತಿರಬಹುದು, ನಾವು ಯಾಕೆ ಸುಮ್ಮನಿದ್ದೇವೆಂದು ಅನ್ನಿಸಬಾರದು ಎಂದು ನಾನಿಂದು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದೇನೆ. ಆದರೆ ನಾನು ಇಷ್ಟರವರೆಗೆ ಈ ಪ್ರಕರಣದ ಬಗ್ಗೆ ಸುಮ್ಮನಿದ್ದದ್ದು ಸಂಭಾಷಣೆಗೆ ಕಾರಣವಾಗಬಾರದೆಂದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಧರ್ಮಸ್ಥಳದ ವಿಭಾಗೀಯ ಮುಖ್ಯಸ್ಥರ ಸಭೆ ನಡೆಸಿದ ವೀರೇಂದ್ರ ಹೆಗ್ಗಡೆಯವರು ಆ ಬಳಿಕ ಮಾತನಾಡಿ, ಕ್ಷೇತ್ರದಲ್ಲಿ 60 ವರ್ಷಗಳಲ್ಲಿ ಬಹಳ ಬದಲಾವಣೆಯಾಗಿದೆ. ಹಲವು ಸೇವೆ ಮಾಡಿಕೊಂಡು ಬಂದಿದ್ದೇವೆ. ಒಳ್ಳೆಯ ಕೆಲಸವೆನ್ನೋದು ಎರಡು ರೀತಿಯ ಕತ್ತಿಯಿದ್ದಂತೆ. ಅದು ಎರಡೂ ಕಡೆಯಿಂದ ಕೊಯ್ಯುತ್ತಿದೆ. ಪ್ರಚಾರದ ದೃಷ್ಟಿಯಲ್ಲಿ ಒಳ್ಳೆಯದು ಹಾಗೂ ದ್ವೇಷ ಕೂಡ ಉಂಟು ಮಾಡುತ್ತಿದೆ. ನಮಗೆ ಕೋಟ್ಯಂತರ ಅಭಿಮಾನಿಗಳ ಬಳಗವಿದೆ. ಇದರಲ್ಲಿ ಕೆಲವರಿಗೆ ದ್ವೇಷ ಆಗಿದೆ. ಇದಕ್ಕೆ ಧರ್ಮಸ್ಥಳದ ಹೆಸರಲ್ಲಿ ಒಳ್ಳೆಯ ಕೆಲಸ ಆಗ್ತಿದೆ ಎಂಬ ಅಸೂಯೆ ಕಾರಣ. ಕ್ಷೇತ್ರದ ಸಂಪತ್ತನ್ನು ಹೇಗೆ ಬಳಸುತ್ತೇವೆ ಎನ್ನುವುದರ ಮೇಲೆ ಅದರ ಪರಿಣಾಮ ಆಗುತ್ತದೆ.
ಆದರೆ ಈಗ ಅವರು ಮಾತನಾಡುವ ವಿಚಾರಗಳು ನಮಗೆ ಸಂಬಂಧವೇ ಇಲ್ಲ. ತನಿಖೆ ಮಾಡಲು ಮೊದಲು ಸರ್ಕಾರಕ್ಕೆ ಮೊದಲು ಪತ್ರ ಬರೆದಿದ್ದೇ ನಾನು. ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಎಂದು ಮುಖ್ಯಮಂತ್ರಿಗಳಿಗೆ ಹೇಳಿದ್ದೇ ನಾನು. ಮತ್ತಷ್ಟು ತನಿಖೆ, ಸಂಶೋಧನೆ ಮಾಡಲಿ ಅದರಿಂದ ನಮಗೆ ತೊಂದರೆಯಿಲ್ಲ. ಆದರೆ ಕ್ಷೇತ್ರದ ವಿಷಯ ಯಾಕೆ ಎಳೆಯುತ್ತಾರೆ ಎಂದು ಗೊತ್ತಾಗ್ತಿಲ್ಲ. ಅನೇಕರು ಬಂದು ಕಣ್ಣೀರು ಹಾಕ್ತಿದಾರೆ, ನಿಮಗೆ ಹೀಗಾದರೆ ಹೇಗೆ ತಡೆಯೋದೆಂದು. ಆದರೆ ಈಗ ಪ್ರೀತಿ ಮತ್ತು ದ್ವೇಷ ಯಾರಿಗಿದೆ ಅಂತ ಗೊತ್ತಾಗ್ತಿದೆ. ನಮ್ಮ ಆತ್ಮ ಮತ್ತು ವ್ಯವಹಾರ ಎಲ್ಲವೂ ಸ್ವಚ್ಛವಾಗಿದೆ. ಗುಬ್ಬಿಗೆ ಬ್ರಹ್ಮಾಸ್ತ್ರ ಬಿಡುವ ಅಗತ್ಯವೇ ಇಲ್ಲ ಎಂದರು.
ನಮ್ಮ ಒಳ್ಳೆಯ ಕಾರ್ಯಕ್ರಮಗಳು ನಡೆಯುತ್ತದೆ. ಇದು ಮಧ್ಯದಲ್ಲಿ ಬಂದ ಮೋಡಗಳಷ್ಟೇ. ಈ ಪರದೆ ತೆಗಿಯಬೇಕು. ಅದನ್ನ ದೇವರು ತೆಗೆಯುತ್ತಾನೆ. ನಿಮ್ಮ ಶಿಸ್ತು ಮತ್ತು ನಿಯಮ ಬಿಡಬೇಡಿ, ನನಗೆ ಯಾವ ಭಯವೂ ಇಲ್ಲ. ನಾವು ಯಾರಿಗೂ ಯಾವ ಅನ್ಯಾಯಕ್ಕೂ ಸಹಕಾರ ಕೊಡಲ್ಲ. ವೈಯಕ್ತಿತ ಅವಮಾನ ಮತ್ತು ವೈಯಕ್ತಿಕ ಸಂಭಾಷಣೆ ಸರಿಯಲ್ಲ, ನಿಲ್ಲಿಸಬೇಕು. ನಮ್ಮ ಅಭಿಮಾನಿಗಳು ರೆಡಿ ಇದ್ದಾರೆ, ಏನಾದ್ರೂ ಮಾಡಲಿಕ್ಕೆ. ಆದರೆ ನಾನು ಏನೂ ಮಾಡಬೇಡಿ ಅಂದಿದ್ದೇನೆ, ನೈತಿಕ ಶಕ್ತಿ ದೊಡ್ಡದು ಅಂದಿದ್ದೇನೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.