ಏಕಾಏಕಿ ಹತ್ತಾರು ಅಡಿ ಆಳಕ್ಕೆ ಕುಸಿದ ಹೆದ್ದಾರಿ: ಕಾರು, ಬೈಕ್ ಗಳು ಹೊಂಡದೊಳಗೆ
Wednesday, July 5, 2023
ಮುಂಬೈ: ಏಕಾಏಕಿ ಹತ್ತಾರು ಅಡಿ ಆಳಕ್ಕೆ ಹೆದ್ದಾರಿ ಕುಸಿದ ಪರಿಣಾಮ ಕಾರು, ದ್ವಿಚಕ್ರ ವಾಹನಗಳು ದೊಡ್ಡ ಗುಂಡಿಯೊಳಕ್ಕೆ ಜಾರಿದ ಅತ್ಯಪರೂಪದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಕುಸಿದ ರಸ್ತೆಯೊಳಗೆ ವಾಹನಗಳು ಸಿಲುಕಿ ಆತಂಕದ ವಾತಾವರಣ ಉಂಟಾಗಿದೆ.
ಮುಂಬೈನ ಚುನಂಭಟ್ಟಿ ಪ್ರದೇಶದ ರಾಹುಲ್‌ನಗರದ ಈಸ್ಟರ್ನ್ ಎಕ್ಸ್ ಪ್ರೆಸ್ ಹೈವೇಯಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ನಡೆದಿದೆ. ಖಾಸಗಿ ನಿರ್ಮಾಣ ಸಂಸ್ಥೆಯೊಂದು ಕಟ್ಟಡ ನಿರ್ಮಾಣಕ್ಕಾಗಿ ಪಕ್ಕದಲ್ಲೇ ಬೃಹತ್ ಪ್ರಮಾಣದಲ್ಲಿ ಅಗೆದಿದ್ದು, ಅದಕ್ಕೆ ತಾಗಿದಂತೆ ಈ ಹೆದ್ದಾರಿ ಸುಮಾರು 25 ಅಡಿಗಳಷ್ಟು ಆಳಕ್ಕೆ ಕುಸಿದಿದೆ.
ಹೀಗೆ ಕುಸಿದ ರಸ್ತೆಯಿಂದ ಉಂಟಾದ ದೊಡ್ಡ ಗುಂಡಿಯೊಳಕ್ಕೆ ಕಾರುಗಳು ಹಾಗೂ ದ್ವಿಚಕ್ರವಾಹನಗಳು ಬಿದ್ದು ಜಖಂಗೊಂಡಿದೆ. ಅದರಲ್ಲೂ ಕಾರೊಂದು ಕುಸಿದು ಹೆದ್ದಾರಿಯ ಅಂಚಿಂದ ಗುಂಡಿಯೊಳಕ್ಕೆ ಬೀಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆ ವಿಡಿಯೋ ವೈರಲ್ ಆಗಿದೆ. ಬಿದ್ದ ವಾಹನಗಳಲ್ಲಿ ಬಹುತೇಕವು ಪಾರ್ಕ್ ಮಾಡಿದ್ದ ವಾಹನಗಳಾದ್ದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ.