-->
ಮಂಗಳೂರು:  ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ‌ - ಉಪನ್ಯಾಸಕನಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ‌ - ಉಪನ್ಯಾಸಕನಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಅಸ್ವಾಭಾವಿಕ ಲೈಂಗಿಕಕ್ರಿಯೆ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿರುವ ಅಪರಾಧಿ ಉಪನ್ಯಾಸಕನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-1) ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕುಳಾಯಿ ನಿವಾಸಿ ಪೃಥ್ವಿರಾಜ್ (33) ಶಿಕ್ಷೆಗೊಳಗಾದ ಅಪರಾಧಿ. ಈತ 2014ರ ಆ.1 - 2016ರ ಸೆ.2ರವರೆಗೆ ಪ್ರೌಢಶಾಲಾ ವಿದ್ಯಾರ್ಥಿಯೊಬ್ಬನೊಂದಿಗೆ ಅಸ್ವಾಭಾವಿಕ ಲೈಂಗಿಕಕ್ರಿಯೆ ನಡೆಸಿ ದೌರ್ಜನ್ಯ ಎಸಗಿದ್ದನು. ಪೃಥ್ವಿರಾಜ್ ವಿದ್ಯಾರ್ಥಿಯನ್ನು ಯಾವಾಗಲೂ ತನ್ನ ಮನೆಗೆ ಕರೆಯಿಸಿ ನಿರಂತರವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದನು. ಈ ವಿಚಾರ ಯಾರಿಗಾದರೂ ಹೇಳಿದ್ದಲ್ಲಿ ಪರೀಕ್ಷೆಯಲ್ಲಿ ಅಂಕ ಕಡಿತ ಮಾಡುತ್ತೇನೆ. ಹಾಜರಾತಿ ಕಡಿತ ಮಾಡುತ್ತೇನೆ ಎಂದು ಬೆದರಿಸಿದ್ದಾನೆ ಎಂದು ಹೇಳಲಾಗಿದೆ.

ನಿರಂತರ ಅಸಹಜ ಲೈಂಗಿಕ ಕ್ರಿಯೆಯಿಂದ ಬಾಲಕನ ಮರ್ಮಾಂಗದಲ್ಲಿ ಗಾಯವಾಗಿತ್ತು. ಆದ್ದರಿಂದ ವೈದ್ಯರಲ್ಲಿ ತಪಾಸಣೆ ನಡೆಸಲಾಗಿತ್ತು. ಚಿಕಿತ್ಸೆಯ ವೇಳೆ ಬಾಲಕ ತನ್ನ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಮನೆಯವರು ಮತ್ತು ವೈದ್ಯರಿಗೆ ತಿಳಿಸಿದ್ದನು. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸುರತ್ಕಲ್ ಇನ್‌ಸ್ಪೆಕ್ಟರ್ ಚೆಲುವರಾಜ್ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಆರೋಪಿಯ ಮೇಲಿನ ಆರೋಪ ದೃಢಪಟ್ಟಿರುವುದರಿಂದ ಆತ ತಪ್ಪಿತಸ್ಥನೆಂದು ತೀರ್ಪು ನೀಡಿ, ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

ಅಪರಾಧಿಗೆ ಪೋಕ್ಸೊ ಕಾಯಿದೆ ಸೆಕ್ಷನ್ 6ರಡಿ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಹೆಚ್ಚುವರಿ ಕಠಿಣ ಸಜೆ, ಪೋಕ್ಸೊ ಸೆಕ್ಷನ್ 10ರಂತೆ 5 ವರ್ಷ ಸಾದಾ ಸಜೆ, ಐದು ಸಾವಿರ ರೂ. ದಂಡ ಮತ್ತು ದಂಡ ಪಾವತಿಸಲು ತಪ್ಪಿದರೆ ಮೂರು ತಿಂಗಳ ಸಾದಾ ಸಜೆ, ಐಪಿಸಿ ಸೆಕ್ಷನ್ 377ರಡಿ 10 ವರ್ಷ ಕಠಿನ ಸಜೆ, 10 ಸಾವಿರ ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ಮೂರು ತಿಂಗಳ ಕಠಿಣ ಸಜೆ, ಐಪಿಸಿ 506ರಡಿ 1 ವರ್ಷ ಸಾದಾ ಸಜೆ, ಒಂದು ಸಾವಿರ ರೂ.ದಂಡ, ಒಂದು ವೇಳೆ ದಂಡ ಪಾವತಿಸದಿದ್ದರೆ ಹೆಚ್ಚುವರಿ ಒಂದು ತಿಂಗಳು ಹೆಚ್ಚುವರಿ ಸಾದಾ ಸಜೆ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. 

ಅಲ್ಲದೆ ಸಂತ್ರಸ್ತ ಬಾಲಕನಿಗೆ ರಾಜ್ಯ ಸರಕಾರ ಒಂದು ಲಕ್ಷ ರೂ. ಪರಿಹಾರ  ನೀಡುವಂತೆ ಆದೇಶದಲ್ಲಿ ನ್ಯಾಯಾಧೀಶರು ತಿಳಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ವಾದಿಸಿದ್ದರು.

Ads on article

Advertise in articles 1

advertising articles 2

Advertise under the article