ಕುಖ್ಯಾತ ಕಳ್ಳ ಖಾಜಪ್ಪ ಪೊಲೀಸ್ ವಶಕ್ಕೆ: ಮರದ ಮೇಲೆ ಕುಳಿತಿದ್ದವನಿಗೆ ಆರು ಗಂಟೆ ಕಾದು ಕುಳಿತ ಪೊಲೀಸರು
Monday, July 17, 2023
ಕಲಬುರಗಿ: ಕುಖ್ಯಾತ ಕಳ್ಳ ಖಾಜಪ್ಪ ಎಂಬಾತನನ್ನು ಅಫಜಲಪುರ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಅಕ್ಕಲಕೋಟೆ ಪೊಲೀಸರು ಖಾಜಪ್ಪನ ಇರುವಿಕೆಯ ಬಗ್ಗೆ ಮಾಹಿತಿ ನೀಡಿದ ತಕ್ಷಣ ಅಫಜಲಪುರ ತಾಲೂಕಿನ ಸೊನ್ನ ಕ್ರಾಸ್ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸ್ ಸಿಬ್ಬಂದಿ ಕಾಯುತ್ತಿದ್ದರು. ಸೋಮವಾರ ಮುಂಜಾನೆ ನಸುಕಿನ ಜಾವ ಮೂರು ಮೂವತ್ತರ ಸಮಯದಲ್ಲಿ ಕಾರಿನಲ್ಲಿ ಖಾಜಪ್ಪ ಬಂದಿದ್ದಾನೆ. ಪೊಲೀಸರನ್ನು ಕಂಡ ತಕ್ಷಣ ಕಾರ್ ರಿಟರ್ನ್ ತಗೆದುಕೊಂಡು ಪರಾರಿಯಾಗಲೆತ್ನಿಸಿದ್ದಾನೆ. ಆಗ ಅಫಜಲಪುರ ಪಿಎಸ್ಐ ಕಾರ್ ಗ್ಲಾಸ್ ಒಡೆದಿದ್ದಾರೆ. ಆದರೆ ಅವರ ಸರ್ವಿಸ್ ಪಿಸ್ತೂಲ್ ಕಾರ್ನೊಳಗೆ ಬಿದ್ದಿದೆ. ಅದನ್ನು ತಗೆದುಕೊಂಡ ಖಾಜಪ್ಪ ಪರಾರಿಯಾಗಿದ್ದಾನೆ. ಬಳಿಕ ಆತನಿಗಾಗಿ ಹುಡುಕಾಟ ಪೊಲೀಸರು ಆರಂಭಿಸಿದ್ದಾರೆ.
ಮುಂಜಾನೆ ಎಂಟು ಗಂಟೆ ವೇಳೆಗೆ ಆತ ಬಳ್ಳೂರಗಿ ಹೊರವಲಯದಲ್ಲಿ ಇರುವ ಬಗ್ಗೆ ಮಾಹಿತಿ ಬಂದಿತ್ತು. ಖಾಜಪ್ಪ ಜೊತೆಗೆ ರವಿ, ಸಂಜು ಇರುದಾಗಿಯೂ ತಿಳಿದು ಬಂದಿದೆ. ರವಿ ಮತ್ತು ಸಂಜು ಪೊಲೀಸರಿಗೆ ಶರಣಾಗಿದ್ದರು. ಆದರೆ ಖಾಜಪ್ಪ ಮರವೇರಿ ಕೂತಿದ್ದಾನೆ.
ನಾನು ಶೂಟ್ ಔಟ್ ಮಾಡಿಕೊಂಡು ಸಾಯುತ್ತೇನೆ ಎಂದು ಆತ ಬೆದರಿಕೆ ಹಾಕುತ್ತಿದ್ದ. ಖಾಜಪ್ಪನ ಮನೆಯವರನ್ನ ಕರೆಯಿಸಿ ಮನವೊಲಿಸಲು ಯತ್ನಿಸಿದರೂ ಖಾಜಪ್ಪ ಮರದಿಂದ ಕೆಳಗಿಳಿದಿರಲಿಲ್ಲ. ಎಂಟು ಗಂಟೆಯಿಂದ ಆತನ ಮನವೊಲಿಸುವ ಕೆಲಸ ಮಾಡಲಾಗಿದ್ದು, ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ನಾಲ್ಕು ಠಾಣೆಯ 100ಕ್ಕೂ ಅಧಿಕ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದೆವು.
ಕಲಬುರಗಿ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಖಾಜಪ್ಪ ವಿರುದ್ಧ 28 ಪ್ರಕರಣಗಳಿವೆ. ದೊಡ್ಡ ದೊಡ್ಡ ಶ್ರೀಮಂತರ ಮನೆಗಳನ್ನೇ ಕಳ್ಳತನ ಮಾಡುತ್ತಿದ್ದ. ಕಳೆದ ವರ್ಷ ಅಫಜಲಪುರ ಪೊಲೀಸರು ಆತನನ್ನು ಬಂಧಿಸಿದ್ದರು. ಆದರೆ ಜಾಮೀನಿನ ಮೇಲೆ ಹೊರಬಂದಿದ್ದನು. ಮರದ ಮೇಲೆ ಕೂತಿದ್ದ ಖಾಜಪ್ಪ ತನ್ನ ಬಳಿಯಿದ್ದ ಸರ್ವಿಸ್ ರಿವಾಲ್ವರ್ ಅನ್ನು ಎಸ್ಪಿ ಇಶಾಪಂತ್ ಕೈಗಿಟ್ಟು ಕೆಳಗಿಳಿದ್ದಾನೆ. ಸರ್ವಿಸ್ ರಿವಾಲ್ವರ್ ಪಡೆದ ನಂತರ ಖಾಜಪ್ಪನನ್ನ ಬಂಧಿಸಿ ಪೊಲೀಸರು ಕರೆದೊಯ್ದಿದ್ದಾರೆ.