ಉಡುಪಿ ಶೌಚಾಲಯದಲ್ಲಿ ಮೊಬೈಲ್ ಪ್ರಕರಣ- ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಖುಷ್ಟೂ ಆಗಮನ
Thursday, July 27, 2023
ಉಡುಪಿ: ಉಡುಪಿಯ ಖಾಸಗಿ ಅರೆ ವೈದ್ಯಕೀಯ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಟೂ ಸುಂದರ್ ಬುಧವಾರ ಉಡುಪಿಗೆ ಆಗಮಿಸಿದ್ದು, ನಗರದ ಖಾಸಗಿ ಅರೆ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ಪಡೆದಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿನಿಗಾದ ನೋವು ಆಲಿಸಲು ಬಂದಿದ್ದೇನೆ. ಪೊಲೀಸರನ್ನು ಮೊದಲು ಭೇಟಿಯಾಗಿ ಮಾಹಿತಿ ಪಡೆಯುವೆ. ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸುವೆ. ಪ್ರಕರಣದ ಪೂರ್ವಾಪರ ಮೊದಲು ಅರಿಯಬೇಕಿದೆ. ಎರಡು ದಿನಗಳ ಕಾಲ ಉಡುಪಿಯಲ್ಲಿರುವೆ ಎಂದರು.
ಇದಕ್ಕೂ ಮೊದಲು ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಸುದ್ದಿಗೋಷ್ಠಿ ನಡೆಸಿ, ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಟ್ವಿಟ್ ಮಾಡಿದ್ದು, ಆಯೋಗದ ಸದಸ್ಯೆ ಹಾಗೂ ದಕ್ಷಿಣ ಭಾರತದ ಪ್ರತಿನಿಧಿ ಖುಷ್ಟೂ ಸುಂದರ್ ಅವರ ತಂಡ ತನಿಖೆ ನಡೆಸಲಿದೆ,'' ಎಂಬ ಮಾಹಿತಿ ನೀಡಿದ್ದಾರೆ.
''ಆಯೋಗದ ತನಿಖೆಯಿಂದ ಸತ್ಯಾಸತ್ಯತೆ ಹೊರ ಬರ ಲಿದೆ. ಪ್ರಕರಣ ಬೆಳಕಿಗೆ ಬಂದ ಕೂಡಲೇ ಪೊಲೀಸರು ವಿಡಿಯೋ ಮಾಡಿದ ಮೂವರು ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಬೇಕಿತ್ತು. ಈ ಪ್ರಕರಣದಲ್ಲಿ ರಾಜಕೀಯ ಮಾಡದೆ, ಒಬ್ಬ ಮಹಿಳೆಯಾಗಿ ಮಹಿಳಾ ಪರ ಧ್ವನಿ ಎತ್ತಿದ್ದೇನೆ. ಆಯೋಗದ ಮಾಜಿ ಸದಸ್ಯೆಯಾಗಿ ಈ ಪ್ರಕರಣದ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗದ ಚೇರ್‌ಪರ್ಸನ್ ರೇಖಾ ಶರ್ಮಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ನೀಡಿದ್ದೇನೆ. ಅವರು ಮಂಗಳವಾರವೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೊಂದ ವಿದ್ಯಾರ್ಥಿನಿಯ ಹೆಸರು, ಮಾಹಿತಿ ಹೊರಗೆ ಬಾರದಂತೆ, ಯಾವುದೇ ಸಮಸ್ಯೆಯಾಗ ದಂತೆ ಆಯೋಗ ತನಿಖೆ ನಡೆಸಲಿದೆ,'' ಎಂದರು.