ಪ್ರಿಯತಮನ ಭೇಟಿಗಾಗಿ ಇಡೀ ಊರಿನ ವಿದ್ಯುತ್ ಕಟ್ ಮಾಡುತ್ತಿದ್ದ ಯುವತಿ
Monday, July 24, 2023
ಪಟನಾ: ಪ್ರೀತಿ ಕುರುಡು ಎನ್ನುವುದು ಜನಜನಿತ ಮಾತು. ಆದರೆ, ಬಿಹಾರದಲ್ಲಿ ಜೋಡಿಯೊಂದು ಇಡೀ ಊರನ್ನು ಕುರುಡಾಗಿಸಿ ಪರಸ್ಪರರನ್ನು ಭೇಟಿಯಾಗಿದೆ. ತನ್ನ ಪ್ರೇಮಿಯನ್ನು ಭೇಟಿಯಾಗಲು ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆತಿಯಾ ಗ್ರಾಮದಲ್ಲಿ ಯುವತಿಯೊಬ್ಬಳು ಭೇಟಿಯಾಗಲು ಇಡೀ ಊರಿನ ವಿದ್ಯುತ್ ಸಂಪರ್ಕ ವನ್ನು ಕಡಿತಗೊಳಿಸಿದ್ದಾಳೆ.
ಅದೂ ಕೂಡ ಒಂದು, ಎರಡು ಬಾರಿಯಲ್ಲ. ಯಾವಾಗೆಲ್ಲ ಭೇಟಿಯಾಗಬೇಕು ಎಂದು ತೀರ್ಮಾನಿಸಿದಳೋ, ಆಗೆಲ್ಲ ಊರಿನ ಜನರನ್ನು ಕತ್ತಲಿಗೆ ದೂಡಿ, ಪ್ರಿಯ ಸಖನನ್ನು ಸೇರಿದ್ದಾಳೆ.
ಇಂಥ ಧೈರ್ಯ ತೋರಿದ ಯುವತಿಯ ಹೆಸರು ಪ್ರೀತಿ ಕುಮಾರಿ ಪಕ್ಕದ ಗ್ರಾಮದ ರಾಜಕುಮಾರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ತಮ್ಮ ಭೇಟಿಗೆ ಊರಿನ ಜನರು ಅಡ್ಡಿಪಡಿಸುವ ಭೀತಿಯಿಂದ ಪ್ರೀತಿ 'ಕರೆಂಟ್ ಕಟ್' ತಂತ್ರ ಹೆಣೆದಿದ್ದಾಳೆ. ವಿಶೇಷವೆಂದರೆ, ಪ್ರೀತಿ-ರಾಜ್ ಕುಮಾರ್ 'ಡ್ಯುಯೆಟ್ ಸಾಂಗ್' ಮುಗಿಯುವವರೆಗೂ ಊರಿನ ಜನರು ಕತ್ತಲಲ್ಲೇ ಸಮಯ ದೂಡಬೇಕಿತ್ತು!
ಇಲಾಖೆಗೆ ಕಿರಿಕಿರಿ: ಪ್ರತಿ ಬಾರಿ ವಿದ್ಯುತ್ ಕಡಿತವಾದಾಗಲೂ ಊರಿನ ಜನರು ಸಮೀಪದ ವಿದ್ಯುತ್ ಪೂರೈಕೆ ಕೇಂದ್ರ 'ಕೆಇಬಿ'ಗೆ ಕರೆ ಮಾಡುತ್ತಿದ್ದರು. ನಮ್ಮ ಕಡೆಯಿಂದ ಏನೂ ಸಮಸ್ಯೆ ಇಲ್ಲ''ಎಂದು ಅಧಿಕಾರಿಗಳು ಹಾಗೂ ಲೈನ್‌ಮೆನ್ ಹಲವು ಬಾರಿ ತಿಳಿಸುತ್ತಿದ್ದರು.
ನೆರೆಯ ಎಲ್ಲ ಗ್ರಾಮಗಳಲ್ಲಿರುವ ಕರೆಂಟ್ ನಮ್ಮ ಊರಿನಲ್ಲಿ ಏಕಿಲ್ಲ ಎಂಬ ಪ್ರಶ್ನೆ ಜನರನ್ನು ಕಾಡುತ್ತಿತ್ತು. ಆದರೆ, ಕೆಲ ದಿನಗಳ ಮುನ್ನ ಗ್ರಾಮಸ್ಥರ ಕಣ್ಣಿಗೆ ಪ್ರೀತಿ-ರಾಜ್ ಕುಮಾರ್ ಸಿಕ್ಕಿಬಿದ್ದಿದ್ದಾರೆ. ಪಕ್ಕದ ಊರಿನ ರಾಜ್‌ಕುಮಾರ್‌ಗೆ ಜನರು ಥಳಿಸಿದಾಗ 'ಕರೆಂಟ್ ಕಟ್' ಜೂಟಾಟದ ರಹಸ್ಯ ಬಯಲಾಗಿದೆ. ಕೊನೆಗೆ ಯುವಕ ಹಾಗೂ ಯುವತಿಯ ಗಾಢವಾದ ಪ್ರೀತಿಗೆ ಮನಸೋತ ಗ್ರಾಮಸ್ಥರು ಕುಟುಂಬಸ್ಥರನ್ನು ಒಪ್ಪಿಸಿ ಮದುವೆ ಮಾಡಿಸಿದ್ದಾರೆ.