Mangalore - ಮೊಬೈಲ್ ನೋಡಿಕೊಂಡೇ ಬಸ್ ಚಲಾವಣೆ- ವಿಡಿಯೋ ವೈರಲ್ ಬೆನ್ನಿಗೆ ಡ್ರೈವರ್ ಗೆ ಶಾಕ್ ನೀಡಿದ ಕಮೀಷನರ್! ( VIDEO)
Monday, July 24, 2023
ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ತಲಪಾಡಿ ನಡುವೆ ಚಲಿಸುವ ಸಿಟಿ ಬಸ್ ಡ್ರೈವರ್ ಬಸ್ ಚಾಲನೆ ವೇಳೆ ಮೊಬೈಲ್ ಉಪಯೋಗಿಸುತ್ತಿರುವುದನ್ನು ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ. ಚಾಲಕನ ನಿರ್ಲಕ್ಷ್ಯದ ಚಾಲನೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಚಾಲಕನ ನಿರ್ಲಕ್ಷ್ಯದ ಬಸ್ ಚಾಲನೆಯ ವಿರುದ್ಧ ಕ್ರಮಕ್ಕಾಗಿ ಆಗ್ರಹ ಕೇಳಿ ಬಂದಿದೆ. 42 ನಂಬರಿನ ಸೈಂಟ್ ಆಂಟನಿ ಬಸ್ ಚಾಲಕ ನಿರ್ಲಕ್ಷ್ಯ ರೀತಿಯಲ್ಲಿ ಮೊಬೈಲ್ ಉಪಯೋಗಿಸುತ್ತಾ ಬಸ್ ಚಲಾವಣೆ ಮಾಡಿದ್ದಾನೆ. ನೇತ್ರಾವತಿ ಸೇತುವೆಯಿಂದ ಮೊಬೈಲ್ ನೋಡಲು ಆರಂಭಿಸಿದ ಬಸ್ ಡ್ರೈವರ್ ತೊಕ್ಕೊಟ್ಟು ವರೆಗೂ , ಒಂದು ಕೈಯಲ್ಲಿ ಸ್ಟೇರಿಂಗ್, ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಬೇಜವಾಬ್ದಾರಿಯುತ ವಾಗಿ ಬಸ್ಸನ್ನು ಚಲಾಯಿಸಿದ್ದಾನೆ.
ಬಸ್ಸಲ್ಲಿ ಅಧಿಕ ಪ್ರಯಾಣಿಕರೂ ಇದ್ದರು ಎಂಬುದನ್ನು ಪ್ರಯಾಣಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಸ್ತೆಗಿಂತ ಹೆಚ್ಚಾಗಿ ಮೊಬೈಲನ್ನೇ ಚಾಲಕ ವೀಕ್ಷಿಸುತ್ತಿರುವುದು ಕಂಡು ಬಂದಿದೆ. ಸಾರಿಗೆ ಅಧಿಕಾರಿಗಳು ಬಸ್ ಪರ್ಮಿಟ್ ರದ್ದುಗೊಳಿಸಬೇಕು ಹಾಗೂ ಸಂಚಾರಿ ಪೊಲೀಸರು ಚಾಲಕನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಮೀಷನರ್ ಕೊಟ್ಟರು ಶಾಕ್!
ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಈ ಬಗ್ಗೆ ಪ್ರತಿಕ್ರೀಯಿಸಿದ್ದು ತಪ್ಪಿತಸ್ಥ ಬಸ್ ಚಾಲಕನ ವಿರುದ್ಧ ದಕ್ಷಿಣ ಟ್ರಾಫಿಕ್ ಪಿಎಸ್ ಕ್ರಮ ಕೈಗೊಂಡಿದೆ. ಅಲ್ಲದೆ ಅವರ ಡಿಎಲ್ ಅನ್ನು ರದ್ದುಗೊಳಿಸಲು ಆರ್‌ಟಿಒಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.