ದಂಪತಿ ನಡುವೆ 'ಆತ' ಬಂದ: ಪೊಲೀಸ್ ಸಮ್ಮುಖವೇ ಅತ್ತಿಗೆಗೂ - ಮೈದುನನಿಗೂ ನಡೆಯಿತು ಮದುವೆ
Sunday, July 23, 2023
ಸೋನೆಪುರ್: ಮೈದುನನೊಂದಿಗೆ ಪರಾರಿಯಾಗಿದ್ದ ಯುವತಿ ಪತಿಯನ್ನು ತೊರೆದು ಪೊಲೀಸರ ಸಮ್ಮುಖದಲ್ಲೇ ಆತನನ್ನು ವಿವಾಹವಾಗಿರುವ ವಿಚಿತ್ರ ಘಟನೆ ಒಡಿಶಾದ ಸೋನೆಪುರ್ದ ಸುಬಲಯ ಗ್ರಾಮದಲ್ಲಿ ನಡೆದಿದೆ.
ಮೂರು ವರ್ಷಗಳ ಹಿಂದೆ 22 ವರ್ಷದ ಜಿಲ್ಲಿ ಎಂಬಾಕೆಯನ್ನು ಮಾಧಬ್ ಪ್ರಧಾನ್ನನ್ನು ವಿವಾಹವಾಗಿದ್ದಳು. ವಿವಾಹದ ಬಳಿಕ ಅನ್ಯೋನ್ಯವಾಗಿದ್ದ ಜಿಲ್ಲಿ ಪತಿ ಮನೆಯಲ್ಲಿ ಸುಖವಾಗಿಯೇ ಇದ್ದಳು. ಆದರೆ ಮಾಧಬ್ ಸೋದರಸಂಬಂಧಿ ಪರಮೇಶ್ವರ್ ಜಿಲ್ಲಿಯನ್ನು ಭೇಟಿಯಾಗುವವರೆಗೂ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಆ ಬಳಿಕ ದಂಪತಿಗಳ ನಡುವೆ ಕಲಹ ಆರಂಭವಾಗಿದೆ.
ಈ ನಡುವೆ ಜಿಲ್ಲಿ ಹಾಗೂ ಪರಮೇಶ್ವರ್ ನಡುವೆ ಪ್ರೇಮಾಂಕುರವಾಗಿ, ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದೆ. ಇವರಿಬ್ಬರ ಪ್ರೇಮಕಥೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಗೆ ತಿಳಿದ ಬಳಿಕ ಈ ವಿಷಯವು ವಿಕೋಪಕ್ಕೆ ತಿರುಗಿದೆ. ಆದ್ದರಿಂದ ಇಬ್ಬರೂ ಕಳೆದ ವಾರ ಓಡಿಹೋಗಿ ತಲೆಮರೆಸಿಕೊಂಡಿದ್ದರು.
ಕೊನೆಗೆ ಮಾಧಬ್ ಈ ಕುರಿತು ಪೊಲೀಸ್ ಮೆಟ್ಟಿಲೇರಿದ್ದಾನೆ. ಆತ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ರಕ್ಷಿಸಿ ಠಾಣೆಗೆ ಕರೆತಂದಿದ್ದಾರೆ. ಕೊನೆಗೆ ಕುಟುಂಬಸ್ಥರು ಇಬ್ಬರಿಗೂ ತಿಳುವಳಿಕೆ ಹೇಳಿದ್ದು, ಇಬ್ಬರು ಅದನ್ನು ನಿರ್ಲಕ್ಷಿಸಿ ಪರಸ್ಪರ ಮದುವೆಯಾಗುವುದಾಗಿ ಹಠ ಹಿಡಿದಿದ್ದಾರೆ. ಕುಟುಂಬಸ್ಥರ ಪ್ರಯತ್ನ ವಿಫಲವಾದ ಬಳಿಕ ಪೊಲೀಸ್ ಠಾಣೆಯಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಇಬ್ಬರ ವಿವಾಹ ನೆರವೇರಿದೆ.