ಟೊಮ್ಯಾಟೊ ಕಾಯಲು ಬೌನ್ಸರ್ ನೇಮಿಸಿ ಪೇಚಿಗೆ ಸಿಲುಕಿದ ತರಕಾರಿ ವ್ಯಾಪಾರಿ
Tuesday, July 11, 2023
ವಾರಣಾಸಿ: ಟೊಮೊಟೊ ಬೆಲೆ ಗಗನಕ್ಕೇರುತ್ತಿದೆ. ಅದರಂತೆ ಉತ್ತರಪ್ರದೇಶದ ವಾರಾಣಾಸಿಯಲ್ಲಿ ವ್ಯಾಪಾರಿಯೊಬ್ಬ ತನ್ನ ಅಂಗಡಿಯಲ್ಲಿರುವ ತರಕಾರಿ ಕಾಯಲು ಬೌನ್ಸರ್‌ಗಳನ್ನು ನೇಮಿಸಿ ದೇಶಾದ್ಯಂತ ಸುದ್ದಿಯಾಗಿದ್ದನು. ಇನ್ನು ಈ ಪ್ರಕರಣದ ಬಗ್ಗೆ ಹೊಸ ವಿಚಾರಕ್ಕೆ ಬರುವುದಾದರೆ ಆತ ಬೌನ್ಸರ್‌ಗಳನ್ನು ನೇಮಿಸಿದ್ದು, ತರಕಾರಿ ಕಾಯಲು ಅಲ್ಲ ಬದಲಿಗೆ ಬೆಲೆಯೇರಿಕೆ ವಿರುದ್ಧ ಪ್ರತಿಭಟನೆ ನಡೆಸಲು ಎಂದು ತಿಳಿದು ಬಂದಿದೆ.
ರಾಜ್‌ನಾರಾಯಣ್ ಎಂಬಾತನಿಗೆ ಸೇರಿದ ಈ ತರಕಾರಿ ಮಳಿಗೆಯಲ್ಲಿ ಅಜಯ್ ಫೌಜಿ ಎಂಬ ಹೆಸರಿನ ಸಮಾಜವಾದಿ ಪಕ್ಷದ ಮುಖಂಡ ನಿರಂತರ ಬೆಲೆಯೇರಿಕೆ ಖಂಡಿಸಿ ಸರ್ಕಾರದ ವಿರುದ್ಧ ಪ್ರತಿಭಟಿಸಿ ವರಿಷ್ಠರ ಗಮನ ಸೆಳೆಯಲು ಹೋಗಿ ತರಕಾರಿ ವ್ಯಾಪಾರಿಯನ್ನು ಸಹ ಪೇಚಿಗೆ ಸಿಲುಕಿಸಿದ್ದಾನೆ. ಈ ಕುರಿತು ಪೊಲೀಸರು ಅಂಗಡಿ ಮಾಲೀಕ ರಾಜ್ ನಾರಾಯಣ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಅವರು ನಿಜ ವಿಚಾರ ತಿಳಿಸಿದ್ದಾರೆ. 'ಅಜಯ್ ಫೌಜಿ ಎಂಬಾತ ದಿಢೀರನೆ 500 ರೂಪಾಯಿ ಮೌಲ್ಯದ ಟೊಮೆಟೊ ಹಾಗೂ ಇಬ್ಬರು ಬೌನ್ಸರ್‌ಗಳ ಜೊತೆ ಬಂದು ನನ್ನನ್ನು ಹೊರ ಕಳುಹಿಸಿ ಆತ ಕುಳಿತುಕೊಂಡು ವ್ಯಾಪಾರ ಮಾಡಲು ಶುರು ಮಾಡಿದ.
ಬಳಿಕ ನನ್ನ ಅಂಗಡಿಯ ಸುತ್ತಲೂ ಬೆಲೆಯೇರಿಕೆನ್ನು ಖಂಡಿಸಿ ಪ್ರತಿಭಟನೆ ಎಂಬ ಫಲಕಗಳನ್ನು ಅಂಟಿಸಿ ಘೋಷಣೆಗಳನ್ನು ಕೂಗಲು ಆರಂಭಿಸಿದ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ತರಕಾರಿ ಅಂಗಡಿ ಮಾಲೀಕ ರಾಜ್ ನಾರಾಯಣ್ ಪೊಲೀಸರಿಗೆ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮಾರಿಸಿಕೊಂಡಿರುವ ಆರೋಪಿ ಅಜಯ್ ಫೌಜಿ, ಇಬ್ಬರು ಬೌನ್ಸರ್ ಸೇರಿದಂತೆ ಓರ್ವನನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಿದ್ದಾರೆ. ಈ ರೀತಿ ಹುಚ್ಚಾಟ ಮೆರೆಯುವವರನ್ನು ಸುಮ್ಮನೇ ಬಿಡುವ ಮಾತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.