ಬಿಜೆಪಿ ಜೆಡಿಎಸ್ ವಿಲೀನದ ಪ್ರಸ್ತಾಪ ಮುಂದಿಟ್ರ ಅಮಿತ್ ಶಾ ? - ಕುಮಾರಸ್ವಾಮಿ ಏನಂದ್ರು
Sunday, July 16, 2023
ರಾಜ್ಯ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುಖಭಂಗ ಆಗದಂತೆ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ.
ರಾಜ್ಯ ಬಿಜೆಪಿ ಮುಖಂಡರುಗಳಾದ ಯಡಿಯೂರಪ್ಪ ಮತ್ತು ಬಿ ಎಲ್ ಸಂತೋಷ್ ಅವರಿಗೆ ಮಾತ್ರ ಮಾಹಿತಿ ನೀಡಿ ದೆಹಲಿ ಮಟ್ಟದಿಂದಲೇ ಜೆಡಿಎಸ್ ಜೊತೆಗೆ ಮೈತ್ರಿ ಪ್ರಸ್ತಾಪವನ್ನು ಹೈಕಮಾಂಡ್ ಮುಖಂಡರು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಭೇಟಿ ಆಗಿದ್ದ ಕುಮಾರಸ್ವಾಮಿ ಅವರಲ್ಲಿ ಜೆಡಿಎಸ್ ಅನ್ನು ಬಿಜೆಪಿ ಜೊತೆಗೆ ವಿಲೀನ ಮಾಡುವಂತೆ ಅಮಿತ್ ಶಾ ಪ್ರಸ್ತಾಪವನ್ನಿಟ್ಟಿದ್ದಾರೆ.
ಆದರೆ ಅಮಿತ್ ಶಾ ಅವರ ವಿಲೀನ ಪ್ರಸ್ತಾವಕ್ಕೆ ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿಲ್ಲ. ಪ್ರಾದೇಶಿಕ ಪಕ್ಷವಾಗಿ ಉಳಿಯುವುದಾಗಿ ತಿಳಿಸಿದ್ದು, ಲೋಕಸಭಾ ಚುನಾವಣೆ ಯಲ್ಲಿ ಮೈತ್ರಿ ಮಾಡಿಕೊಳ್ಳಲು ಸಿದ್ದ ಎಂದು ತಿಳಿಸಿದ್ದಾರೆ.
ಕೋಲಾರ , ಹಾಸನ, ಮೈಸೂರು, ಬೆಂಗಳೂರು ಉತ್ತರ, ಮಂಡ್ಯ ಕ್ಷೇತ್ರ ಸೇರಿದಂತೆ ಏಳು ಕ್ಷೇತ್ರದಲ್ಲಿ ಜೆಡಿಎಸ್ ಗೆ ಸ್ಥಾನ ಹಂಚಿಕೆ ಮಾಡಿ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಮುಂದಾಗಿದ್ದು, ಬಿಜೆಪಿ ಹೈಕಮಾಂಡ್ 4 ಕ್ಷೇತ್ರ ಜೆಡಿಎಸ್ ಗೆ ಬಿಟ್ಟುಕೊಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಮೈತ್ರಿಯ ಕಾರಣದಿಂದ ವಿರೋಧ ಪಕ್ಷದ ನಾಯಕನ ಸ್ಥಾನ ಆಯ್ಕೆ ಮಾಡುವುದರ ಮೇಲೆ ಪರಿಣಾಮ ಬೀರಿದೆ. ಮೈತ್ರಿ ಮಾಡಿಕೊಂಡರೆ ವಿರೋಧ ಪಕ್ಷದ ನಾಯಕನ ಸ್ಥಾನ ಕುಮಾರಸ್ವಾಮಿ ಗೆ ನೀಡುವುದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವಾಗಿದ್ದರೆ, ಮುಂದಿನ ಬಾರಿ ಕೇಂದ್ರದಲ್ಲಿ ಮಂತ್ರಿ ಸ್ಥಾನ ಪಡೆಯುವುದು ಕುಮಾರಸ್ವಾಮಿ ಲೆಕ್ಕಾಚಾರವಾಗಿದೆ. ಇದರ ನಡುವೆ ಬಿಜೆಪಿ ಜೆಡಿಎಸ್ ಮೈತ್ರಿಯ ಲೆಕ್ಕಾಚಾರವಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.