ಪ್ರೀತಿ ನಿರಾಕರಣೆ : ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿಯನ್ನು ಜೀವಂತ ಸಮಾಧಿ ಮಾಡಿದ ಪ್ರಿಯಕರ
Friday, July 7, 2023
ಸಿಡ್ನಿ: ಭಾರತೀಯ ಮೂಲದ ನರ್ಸಿಂಗ್ ವಿದ್ಯಾರ್ಥಿನಿಯನ್ನು ಆಕೆಯ ಪ್ರಿಯಕರನೇ ಸಜೀವ ಸಮಾಧಿ ಮಾಡಿದ್ದ ಅಮಾನುಷ ಕೃತ್ಯವೊಂದು ನ್ಯಾಯಾಲಯದ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಸಿಡ್ನಿಯ ಅಡಿಲೇಡ್ ನಗರದಲ್ಲಿ ಶಿಕ್ಷಣ ಪಡೆಯಲೆಂದು ವಾಸವಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿ ಜಾಸ್ಮಿನ್ ಕೌರ್ ಮತ್ತು ತಾರಿಕ್ ಜೋತ್ ಸಿಂಗ್ ಪರಸ್ಪರ ಪ್ರೀತಿಯ ಬಲೆಗೆ ಬಿದ್ದಿದ್ದರು. ಈ ನಡುವೆ, ಜಾಸ್ಮಿನ್ ಕೌರ್ ತನ್ನ ಪ್ರೀತಿಯನ್ನು ನಿರಾಕರಿಸುತ್ತಿದ್ದಾಳೆಂಬ ಕಾರಣಕ್ಕೆ ತಾರಿಕ್ ಆಕೆಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ. 2021ರ ಮಾರ್ಚ್ ತಿಂಗಳಲ್ಲಿ ಆಡಿಲೇಡ್ ನಿಂದ ಆಕೆಯನ್ನು ಅಪಹರಿಸಿದ್ದಾನೆ. ಬಳಿಕ ಜಾಸ್ಮಿನ್ ಬಾಯಿಗೆ ಟೇಪ್ ಅಂಟಿಸಿ, ಕೈಕಾಲುಗಳನ್ನೂ ಕಟ್ಟಿಹಾಕಿ ಕಾರಿನ ಹಿಂಭಾಗದ ಢಿಕ್ಕಿಯಲ್ಲಿರಿಸಿ 400 ಕಿಮೀ ದೂರಕ್ಕೆ ಪ್ರಯಾಣಿಸಿದ್ದಾನೆ. ಬಳಿಕ ಫಿಂಡರ್ಸ್ ರೇಂಜ್ ಎಂಬಲ್ಲಿ ಅರೆಪ್ರಜ್ಞೆ ಸ್ಥಿತಿಯಲ್ಲಿದ್ದ ಆಕೆಯನ್ನು ಜೀವಂತವುದ್ದಾಗಲೇ ಮಣ್ಣಿನಡಿಯಲ್ಲಿ ಹೂತು ಹಾಕಿದ್ದಾನೆ.
ಇತ್ತ ಜಾಸ್ಮಿನ್ ನಾಪತ್ತೆಯಾದ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಪೊಲೀಸರು ಸಂಶಯದಲ್ಲಿ ಹಳೆ ಬಾಯ್ ಫ್ರೆಂಡ್ ಆಗಿದ್ದ ತಾರಿಕ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಕೊನೆಯ ಬಾರಿಗೆ ಆಕೆ ಮಿಸ್ ಆಗಿದ್ದ ಅಡಿಲೇಡ್ ನಗರದಲ್ಲಿ ತಾರಿಕ್ ಟೇಪ್ ಮತ್ತು ಹಗ್ಗವನ್ನು ಖರೀದಿಸಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದನ್ನು ಆಧರಿಸಿ ತನಿಖೆ ಚುರುಕುಗೊಳಿಸಿದಾಗ ಕೊಲೆ ಪ್ರಕರಣ ಬಯಲಾಗಿದ್ದಲ್ಲದೆ, ಆರೋಪಿ ತಾರಿಕ್ ನನ್ನು ಕೊಲೆ ನಡೆದ ಕೆಲವೇ ದಿನಗಳಲ್ಲಿ ಬಂಧಿಸಲಾಗಿದೆ.
ಜಾಸ್ಮಿನ್ ಮೃತದೇಹವನ್ನು ಹೊರತೆಗೆದು ಪರೀಕ್ಷೆ ನಡೆಸಿದಾಗ ಸಜೀವ ಹೂತು ಹಾಕಿದ್ದು ಮಣ್ಣು ಮುಚ್ಚಿದ್ದರೂ ಉಸಿರಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಕಾರಿನಲ್ಲಿ ಕೈಕಾಲು ಕಟ್ಟಿ ತಂದು ಗುಂಡಿ ತೋಡಿ ಹಾಗೆಯೇ ಹೂತು ಹಾಕಿರುವುದು ಅತ್ಯಂತ ಅಮಾನುಷ ಕೃತ್ಯ ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ. ವಿಚಾರಣೆ ಸಂದರ್ಭ ಪೊಲೀಸರು ನೀಡಿದ್ದ ಸಾಕ್ಷ್ಯ ಕ್ರೂರವಾಗಿ ಹಿಂಸಿಸಿ ಸಜೀವ ಸಮಾಧಿ ಮಾಡಿರುವ ವಿಚಾರಗಳಿದ್ದವು. ಅಲ್ಲದೆ, ತಾನೊಬ್ಬನೇ ಕೃತ್ಯ ಎಸಗಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದ.
ಮೃತ ಯುವತಿಯ ಪರ ವಕೀಲರು, ಅತ್ಯಂತ ಅಮಾನುಷ ಕೃತ್ಯವಾಗಿದ್ದು ಆರೋಪಿಗೆ ಗರಿಷ್ಠ ಶಿಕ್ಷೆಯಾಗಬೇಕೆಂದು ಹೇಳಿದ್ದರು. ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಯುವತಿ ತಾಯಿ, ತನ್ನ ಮಗಳನ್ನು ಅಮಾನುಷವಾಗಿ ಕೊಂದ ಆರೋಪಿ ಉಳಿಯಬಾರದು. ಆತನಿಗೆ ಗಲ್ಲು ಶಿಕ್ಷೆಯನ್ನೇ ನೀಡಬೇಕೆಂದು ಆಗ್ರಹ ಮಾಡಿದ್ದರು.