-->
ಹೊಸದೆಹಲಿಯ ಫ್ಲೈಓವರ್ ಬಳಿ ತುಂಡುತುಂಡಾಗಿ ಕತ್ತರಿಸಿದ ಮಹಿಳೆಯ ಮೃತದೇಹ ಪತ್ತೆ - ನಗರದ ಹಲವೆಡೆ ಎಸೆದ ಕೊಲೆಗಡುಕರು

ಹೊಸದೆಹಲಿಯ ಫ್ಲೈಓವರ್ ಬಳಿ ತುಂಡುತುಂಡಾಗಿ ಕತ್ತರಿಸಿದ ಮಹಿಳೆಯ ಮೃತದೇಹ ಪತ್ತೆ - ನಗರದ ಹಲವೆಡೆ ಎಸೆದ ಕೊಲೆಗಡುಕರು

ನವದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಮತ್ತೊಂದು ಭೀಕರ ಹತ್ಯೆ ಪ್ರಕರಣ ಬಯಲಾಗಿದೆ. ಮಹಿಳೆಯ ಮೃತದೇಹವನ್ನು ತುಂಡುತುಂಡಾಗಿ ಕತ್ತರಿಸಿ ಹಲವೆಡೆ ದೇಹದ ಭಾಗಗಳನ್ನು ಎಸೆಯಲಾಗಿದೆ. ದಿಲ್ಲಿಯ ಗೀತಾ ಕಾಲನಿಯ ಫೈ ಓವರ್ ಬಳಿ ಮೃತದೇಹದ ಕೆಲವು ತುಂಡುಗಳು ಪತ್ತೆಯಾಗಿವೆ.

ಪ್ರಾಥಮಿಕ ತನಿಖೆಯಲ್ಲಿ ಇದೊಂದು 35 - 40 ವರ್ಷದ ಮಹಿಳೆಯ ಮೃತದೇಹ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಮೃತದೇಹದ ತುಂಡುಗಳನ್ನು ಸಂಗ್ರಹಿಸಿರುವ ಪೊಲೀಸರು, ವಿಧಿವಿಜ್ಞಾನ ಪರೀಕ್ಷೆ ಹಾಗೂ ಮರಣೋತ್ತರ ಪರೀಕ್ಷೆಗೆ ಒಪ್ಪಿಸಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ. ಕಪ್ಪುಬಣ್ಣದ ಪಾಲಿಥೀನ್ ಚೀಲದಲ್ಲಿ ಮೃತದೇಹದ ತುಂಡುಗಳು ಪತ್ತೆಯಾಗಿದೆ. ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯ ತಲೆ ಪತ್ತೆಯಾಗಿದೆ. ಮತ್ತೊಂದು ಚೀಲದಲ್ಲಿ ದೇಹದ ಇತರ ಭಾಗಗಳು ಪತ್ತೆಯಾಗಿವೆ. ತಲೆಯ ಕೂದಲು ಉದ್ದವಾಗಿದ್ದು, ಇದು ಮಹಿಳೆಯ ಶವ ಇರಬಹುದು ಎಂದು ಅಂದಾಜಿಸಲಾಗಿದೆ ಎಂದು ದಿಲ್ಲಿ ಕೇಂದ್ರ ವಲಯದ ಜಂಟಿ ಪೊಲೀಸ್‌ ಆಯುಕ್ತ ಪರಮಾಧಿತ್ಯ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಘಟನೆಯ ಸುದ್ದಿ ತಿಳಿದ ಜನರು ಸ್ಥಳಕ್ಕೆ ಧಾವಿಸುತ್ತಿದ್ದು, ಭಯಭೀತರಾಗಿರುವ ಜನರನ್ನು ಪೊಲೀಸರು ನಿಯಂತ್ರಿಸುತ್ತಿದ್ದಾರೆ. ದಿಲ್ಲಿಯ ಯಮುನಾ ಖಾದರ್ ಎಂಬಲ್ಲಿ ಮರ, ಗಿಡಗಳಿಂದ ತುಂಬಿರುವ ಪ್ರದೇಶದಲ್ಲೂ ಮೃತದೇಹದ ತುಣುಕುಗಳು ಪತ್ತೆಯಾಗಿವೆ. ಈ ಭಾಗದಲ್ಲಿ ಎರಡು ಕಡೆ ಪ್ಲಾಸ್ಟಿಕ್ ಚೀಲದಲ್ಲಿ ಶವದ ತುಂಡುಗಳನ್ನು ಎಸೆಯಲಾಗಿತ್ತು ಎಂದು ತಿಳಿದು ಬಂದಿದೆ.‌ ದಿಲ್ಲಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹತ್ಯೆಗೀಡಾದ ಮಹಿಳೆ ಯಾರು? ಎಲ್ಲಿಯ ನಿವಾಸಿ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದಷ್ಟು ಬೇಗ ಈ ಪ್ರಕರಣವನ್ನು ಭೇದಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article