ಪತ್ನಿಯೊಂದಿಗೆ ಮಲಗುತ್ತಿದ್ದ ವೇಳೆ ಮಚ್ಚು ಜೊತೆಗಿಟ್ಟುಕೊಳ್ಳುತ್ತಿದ್ದ ಪತಿಯಿಂದ ನಡೆಯಿತು ಘೋರ ಕೃತ್ಯ
Sunday, July 16, 2023
ಮೈಸೂರು: ಪತಿಯೊಂದಿಗೆ ಮನಸ್ತಾಪವಾಗಿ ಮುನಿಸಿಕೊಂಡು ತವರು ಸೇರಿದ್ದ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಕಿರಾತಕ ಪತಿಯೊಬ್ಬ, ಅಡ್ಡಬಂದ ಅತ್ತೆಯ ಕೊಲೆಗೂ ಯತ್ನಿಸಿರುವ ಅಮಾನುಷ ಘಟನೆ ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಬೇರಂಬಳ್ಳಿ ಗ್ರಾಮದ ನಿವಾಸಿ ಮಾದೇಶ್ (30) ಕೊಲೆಗೈದ ಆರೋಪಿ. ಹರ್ಷಿತಾ (21) ಮೃತಪಟ್ಟ ದುರ್ದೈವಿ ಪತ್ನಿ. ಒಂದು ವರ್ಷದ ಹಿಂದಷ್ಟೇ ಇಬ್ಬರಿಗೂ ಮದುವೆಯಾಗಿತ್ತು. ಪ್ರಾರಂಭದ ದಿನಗಳಲ್ಲಿ ಈ ಜೋಡಿ ಅನ್ಯೋನ್ಯತೆಯಿಂದ ಇದ್ದರು. ಆದರೆ, ದಿನಗಳು ಕಳೆದಂತೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ವಿರಸ ಉಂಟಾಗಿತ್ತು. ಆಗಾಗ ಕಿರಿಕ್ ಮಾಡುತ್ತಿದ್ದ ಮಾದೇಶ್, ಕೊಲೆ ಮಾಡುವುದಾಗಿ ಹರ್ಷಿತಾಳನ್ನು ಬೆದರಿಸುತ್ತಿದ್ದ. ಅಲ್ಲದೆ ಪತ್ನಿಯೊಂದಿಗೆ ಮಲಗುವಾಗಲೆಲ್ಲ ಮಚ್ಚು ಇಟ್ಟುಕೊಂಡು ಮಲಗುತ್ತಿದ್ದ. ಇದಕ್ಕೆ ಹೆದರಿದ್ದ ಹರ್ಷಿತಾ ತವರು ಮನೆಗೆ ಸೇರಿದ್ದಳು. ಹರ್ಷಿತಾಳನ್ನು ಮನೆಗೆ ಕರೆದುಕೊಂಡು ಹೋಗಲು ಕುಂಬಾರಕೊಪ್ಪಲಿಗೆ ಮಾದೇಶ್ ಬಂದಿದ್ದ.
ಮನೆಗೆ ಬರಲು ಹರ್ಷಿತಾ ಒಪ್ಪದಿದ್ದಾಗ, ಸ್ಥಳದಲ್ಲೇ ಭಾರಿ ವಾಗ್ವಾದ ನಡೆದು, ತಾಳ್ಮೆ ಕಳೆದುಕೊಂಡ ಮಾದೇಶ್, ಚಾಕುವಿನಿಂದ ಹರ್ಷಿತಾ ಮೇಲೆ ದಾಳಿ ಮಾಡಿ, ಮನಬಂದಂತೆ ಚುಚ್ಚಿ ಕೊಲೆ ಮಾಡಿದ್ದಾನೆ. ಈ ವೇಳೆ ಅಡ್ಡಬಂದ ಅತ್ತೆಯನ್ನು ಕೊಲ್ಲಲು ಯತ್ನಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮೇಟಗಳ್ಳಿ ಪೋಲೀಸರು ಕೊಲೆ ಮಾಡಿದ ಆರೋಪಿ ಮಾದೇಶ್ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.