ಕಣ್ಣು ಕಿತ್ತು, ನಾಲಗೆ ಕತ್ತರಿಸಿ ಮಹಿಳೆ ಥಳಿಸಿ ಭೀಕರ ಹತ್ಯೆ
Monday, July 10, 2023
ಪಾಟ್ನಾ: ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಮನಬಂದಂತೆ ಥಳಿಸಿ, ಕಣ್ಣು ಕಿತ್ತು, ನಾಲಿಗೆ ಕತ್ತರಿಸಿ ಹತ್ಯೆ ಮಾಡಿರುವ ಅಮಾನುಷ ಘಟನೆ ಪಾಟ್ನಾದ ಖಗಾರಿಯಾ ಜಿಲ್ಲೆಯಲ್ಲಿ ನಡೆದಿದೆ.
ಶನಿವಾರ ಸಂಜೆ ಮೆಹಂದಿಪುರ ಗ್ರಾಮದ ತನ್ನ ಹೊಲದಲ್ಲಿ ಮಹಿಳೆ ಬತ್ತ ಬಿತ್ತನೆ ಮಾಡುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಅಲ್ಲಿಗೆ ಬಂದ ನಾಲ್ವರು ಮಹಿಳೆಯ ಮೇಲೆ ಹಲ್ಲೆ ಮಾಡಿ ಅಮಾನುಷ ರೀತಿಯಲ್ಲಿ ವರ್ತಿಸಿದ್ದಾರೆ. ಘಟನೆ ಬಳಿಕ ತಲೆ ಮರೆಸಿಕೊಂಡಿರುವ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಎರಡು ಬೈಕ್ ಗಳಲ್ಲಿ ಬಂದ ನಾಲ್ವರಯ ಆಕೆಯನ್ನು ಥಳಿಸಿದ್ದಲ್ಲದೇ, ಚಾಕುವಿನಿಂದ ಕಣ್ಣು ಕಿತ್ತು ನಾಲಿಗೆ ಕತ್ತರಿಸಿದ್ದಾರೆ. ಜತೆಗೆ ಗುಪ್ತಾಂಗವನ್ನೂ ಕತ್ತರಿಸಿ ಹಾಕಿದ್ದಾರೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳ ಸಾಕ್ಷಿಯನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೆರೆಯ ಮನೆಯವರಾದ ಮಹೇಂದ್ರ ಸಿಂಗ್, ರುಲೊ ಸಿಂಗ್, ರಾಜೇವ್ ಸಿಂಗ್, ಫುಲುಂಗಿ ಸಿಂಗ್ ಮತ್ತು ಶ್ಯಾಮಕುಮಾರ್ ಸಿಂಗ್ ಅವರ ವಿರುದ್ಧ ಕುಟುಂಬ ಸದಸ್ಯರು ಆರೋಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಐದು ಬಿಘಾ ಜಮೀನಿನ ಬಗ್ಗೆ ನೆರೆಯವರೊಂದಿಗೆ ಸುದೀರ್ಘ ಕಾಲದ ವಿವಾದವಿತ್ತು. ಒಂಬತ್ತು ವರ್ಷದ ಹಿಂದೆ ಸಂತ್ರಸ್ತೆಯ ಪತಿ ಹಾಗೂ ಭಾವಂದಿರು ಇದೇ ವ್ಯಾಜ್ಯದ ಕಾರಣದಿಂದ ಹತ್ಯೆಯಾಗಿದ್ದರು. ವಿವಾದ ನ್ಯಾಯಾಲಯದಲ್ಲಿದ್ದು, ಆರೋಪಿಗಳು ಜಾಮೀನಿನ ಮೇಲೆ ಇದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ಉದ್ರಿಕ್ತ ಗ್ರಾಮಸ್ಥರು ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು, ಆರೋಪಿಗಳನ್ನು ಬಂಧಿಸುವವರೆಗೂ ಮಹಿಳೆಯ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಪೊಲೀಸ್ ಅಧಿಕಾರಿಗಳು ಪ್ರತಿಭಟನಾ ನಿರತರೊಂದಿಗೆ ಸಂಧಾನ ಮಾತುಕತೆ ನಡೆಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಾಸು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.