ಬಹುಮುಖ ಪ್ರತಿಭೆಯ ನೃತ್ಯ ನಿರ್ದೇಶಕ ನವೀನ್ ಶೆಟ್ಟಿ
Sunday, July 30, 2023
ಬಹುಮುಖ ಪ್ರತಿಭೆಯ ಖ್ಯಾತ ನೃತ್ಯ ನಿರ್ದೇಶಕ ನವೀನ್ ಶೆಟ್ಟಿ ಪ್ರಸ್ತುತ ತುಳು, ಕನ್ನಡ, ಕೊಂಕಣಿ ಮುಂತಾದ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಗಮನ ಸೆಳೆಯುತ್ತಿರುವ ಬಹುಮುಖ ಪ್ರತಿಭೆ ನವೀನ್ ಶೆಟ್ಟಿ.
ರೂಪೇಶ್ ಶೆಟ್ಟಿ ಜತೆಗೆ ಆರಂಭದಿಂದಲೂ ಇರುವ ಇವರು ಅವರ ಪ್ರತಿಯೊಂದು ಹೆಜ್ಜೆಯಲ್ಲೂ ಜತೆಗಾರರಾಗಿದ್ದಾರೆ. ರೂಪೇಶ್ ಶೆಟ್ಟಿ ಬಿಗ್‌ಬಾಸ್‌ಗೆ ಹೋಗಿದ್ದಾಗ ಅವರ ಎಲ್ಲ ವ್ಯವಹಾರಗಳನ್ನೂ ಸಮರ್ಥವಾಗಿ ನಿಭಾಯಿಸಿದವರು. ಇವರ ಬಗ್ಗೆ ಒಂದು ಕಿರುಪರಿಚಯ ಇಲ್ಲಿದೆ.
ಶಿವಾನಂದ ಶೆಟ್ಟಿ ಮತ್ತು ಶೋಭಾ ಶೆಟ್ಟಿ ದಂಪತಿಯ ಪುತ್ರರಾಗಿರುವ ಇವರು ಆರಂಭದ ಶಿಕ್ಷಣವನ್ನು ಕಾಸರಗೋಡಿನ ಕೂಡ್ಲು ಹೈಸ್ಕೂಲ್‌ನಲ್ಲಿ ಮುಗಿಸಿ ಬಳಿಕ ಶಿಕ್ಷಣಕ್ಕಾಗಿ ಮಂಗಳೂರಿಗೆ ಬಂದು ಬೊಕ್ಕಪಟ್ಣ ಕಾಲೇಜಿನಲ್ಲಿ ಪಿಯುಸಿ ಹಾಗೂ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಪದವಿ ಮುಗಿಸಿದರು. ಆಗಲೇ ಅವರಿಗೆ ನೃತ್ಯ ಮತ್ತು ಸಿನೆಮಾದಲ್ಲಿ ಅಪಾರ ಆಸಕ್ತಿ. ಮಂಗಳೂರಿಗೆ ಬಂದ ಬಳಿಕ ಆ ಆಸಕ್ತಿ ಮತ್ತಷ್ಟು ಚಿಗುರಿತು, ಬೆಳೆಯಿತು. ಶಿಕ್ಷಣ ಮುಗಿಸಿದ ಬಳಿಕ ಬೆಂಗಳೂರು, ದುಬಾಯಿಯಲ್ಲಿ ಸ್ವಲ್ಪ ಕಾಲ ಉದ್ಯೋಗ ಮಾಡಿದ ಅವರು ಬಳಿಕ ಊರಿಗೆ ಮರಳಿದರು. ಪತ್ನಿ ಸುಷ್ಮಾರೊಂದಿಗೆ ಮಂಗಳೂರಿನಲ್ಲಿ ಆರ್ಯನ್ಸ್ ಡ್ಯಾನ್ಸ್ ಸ್ಟುಡಿಯೋ ಆರಂಭಿಸಿದರು. ಪತ್ನಿ ಸುಷ್ಮಾ ಇವರ ಬೆನ್ನಿಗಿದ್ದು ಸಹಕಾರ ನೀಡಿದರು.
ಬಳಿಕ ರೂಪೇಶ್ ಶೆಟ್ಟಿ ಜತೆಗೆ ಸೇರಿ ಪೊರ್ಲು ಆಲ್ಬಂ ಮಾಡಿದ್ದು, ಅದರಲ್ಲಿ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಅದರ ಮೂಲಕ ಪರದೆಯಲ್ಲೂ ಕಾಣಿಸಿಕೊಂಡರು. ಉತ್ತಮ ಡ್ಯಾನ್ಸರ್ ಕೂಡ ಆಗಿರುವ ಇವರು ಮದಿಮೆ ಸಿನಿಮಾದಲ್ಲಿ ಮಾಡಿದ್ದ ನೃತ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಳಿಕ ನೃತ್ಯ ಸಂಯೋಜಕರಾಗಿ ಪದೋನ್ನತಿ ಪಡೆದುಕೊಂಡು ಝೀ ಟಿವಿಯ ಕುಣಿಯೋಣು ಬಾರಾ, ಸೋನಿ ವೂಗಿ ಬೂಗಿ, ಕಸ್ತೂರಿ ದಂ, ಏಷ್ಯಾನೆಟ್, ಕೈರಳಿ ಮುಂತಾದ ಅನೇಕ ಟೀವಿ ಚಾನೆಲ್‌ಗಳಲ್ಲಿ ಕಾರ್ಯಕ್ರಮ ಕೊಡಿಸಿದ್ದರು.
ನವೀನ್ ಶೆಟ್ಟಿ ಅವರು ರಂಬಾರೂಟಿ, ಕಟಪಾಡಿ ಕಟ್ಟಪ್ಪೆ, ಕಂಬಳಬೆಟ್ಟು ಭಟ್ರೆನ್ ಮಗಳ್, ಬೆಲ್ಚಪ್ಪ, ಗಿರಿಗಿಟ್, ಲಕ್ಕಿ ಬಾಬು, ಗಂಜಾಲ್, ರಾಜ್ ಸೌಂಡ್‌್ಸ ಆ್ಯಂಡ್ ಲೈಟ್‌್ಸ, ಎಂಕ್ ಮದಿಮಾಯೆ, ಸರ್ಕಸ್ ಮುಂತಾದ ತುಳು ಚಿತ್ರಗಳಲ್ಲಿ, ನಿಶ್ಶಬ್ದ 2, ಆನುಷ್ಕಾ ಎಂಬ ಕನ್ನಡ ಚಿತ್ರಗಳಲ್ಲಿ, ಝನ್‌ವೊಯಿ ನಂಬರ್ 1 ಎಂಬ ಕೊಂಕಣಿ ಚಿತ್ರದಲ್ಲೂ ಸ್ವತಃ ನೃತ್ಯದಲ್ಲಿ ದುಡಿದಿದ್ದಾರೆ.
ಇವರ ತಂಡವು ಮದಿಮೆ, ದಂಡ್, ಎಕ್ಕಸರ, ಚಂಡಿಕೋರಿ, ಬೊಳ್ಳಿಲು, ದೊಂಬರಾಟ, ಪಿಲಿಬೈಲ್ ಯಮುನಕ್ಕ, ಬರ್ಸ, ಅರ್ಜುನ್ ವೆಡ್ಸ್ ಅಮೃತಾ, ಅರೆಮರ್ಲೆರ್, ಕೋರಿರೊಟ್ಟಿ, ಉಮಿಲ್, ದಗಲ್ಬಾಜಿಲು, ಪಮ್ಮಣ್ಣೆ ದಿ ಗ್ರೇಟ್, ಇಲ್ಲೊಕ್ಕೆಲ್, ಜಬರ್ದಸ್ತ್ ಶಂಕರೆ ಮುಂತಾದ ತುಳು ಚಿತ್ರಗಳಲ್ಲಿ, ಜಾತ್ರೆ, ಕೆಸಿಕೆ ಪುಟ್ಟಣ್ಣ, ಉಪ್ಪಿ 2, ಅನಿರುದ್ದ್, ಡ್ರೀಮ್ ಗರ್ಲ್ ಮತ್ತು ಮಾವುತ ಎಂಬ ಕನ್ನಡ ಸಿನಿಮಾಗಳಲ್ಲಿ, ಏಕ್ ಅಸ್ಲ್ಬಾರ್ ಏಕ್ ನ ಎಂಬ ಕೊಂಕಣಿ ಸಿನಿಮಾದಲ್ಲಿ ಹಾಗೂ ರಂಗ್‌ರಂಗೀಲಾ ಎಂಬ ಮಲಯಾಳಿ ಸಿನೆಮಾದಲ್ಲೂ ಕೆಲಸ ಮಾಡಿದೆ.
ಉತ್ತಮ ಭವಿಷ್ಯ
ನವೀನ್ ಶೆಟ್ಟಿಗೆ ಸಿನಿಮಾ ರಂಗದಲ್ಲಿ ಅತ್ಯುತ್ತಮ ಅವಕಾಶ ಇರುವುದು ಖಚಿತ ಎಂಬುದಕ್ಕೆ ಅವರ ಈ ವರೆಗಿನ ಸಾಧನೆಯೇ ಸಾಕ್ಷಿ. ಅವರ ಚಿಂತನೆ, ಹೊಸತನ, ಮೃದುಸ್ವಭಾವ, ಸರಳಸಜ್ಜನಿಕೆ ಹಾಗೂ ಕಠಿನ ಪರಿಶ್ರಮವು ಇದರ ಹಿಂದಿದೆ, ಎಲ್ಲವನ್ನೂ ತಾಳ್ಮೆಯಿಂದ ಆಲಿಸುವ ಎಲ್ಲೂ ದುಡುಕದೆ ಕೆಲಸ ಮಾಡುತ್ತಿರುವುದು ಅವರನ್ನು ವೃತ್ತಿ ಬದುಕಿನಲ್ಲಿ ಎತ್ತರಕ್ಕೆ ಏರಿಸಿದೆ. ಅವರ ಸಿನಿಮಾ ವೃತ್ತಿ ಭವಿಷ್ಯ ಉಜ್ವಲವಾಗಲಿ ಎಂಬುದು ಹಾರೈಕೆ.
ಹೊಸತನದ ಆಕರ್ಷಣೆ
ನವೀನ್ ಶೆಟ್ಟಿ ಅವರ ನೃತ್ಯ ಸಂಯೋಜನೆಯಲ್ಲಿ ಹೊಸತನ ಮತ್ತು ಆಕರ್ಷಣೆ ಎದ್ದು ಕಾಣುತ್ತಿದ್ದು, ಅದಕ್ಕೆ ಈ ಹಿಂದಿನ ಬಹುತೇಕ ನೃತ್ಯಗಳು ಸಾಕ್ಷಿಯಾಗಿವೆ. ಆದ್ದರಿಂದ ಅವರಿಗೆ ಈಗ ಹೆಚ್ಚೆಚ್ಚು ಅವಕಾಶಗಳೂ, ಬೇಡಿಕೆಗಳೂ ಬರುತ್ತಿವೆ. ಆಕರ್ಷಕ ದೇಹಡಾರ್ಢ್ಯತೆಯನ್ನೂ ಹೊಂದಿರುವ ಅವರು ಸುಂದರಾಂಗರೂ ಆಗಿದ್ದಾರೆ. ಇವರ ಕಾರಣದಿಂದಲೇ ಕೆಲವು ಸಿನಿಮಾಗಳು ಗೆದ್ದಿವೆ ಎಂಬುದೂ ಹೆಮ್ಮೆಯ ಸಂಗತಿ. ನವೀನ್ ನೃತ್ಯ ಸಂಯೋಜನೆಯ ಜೊತೆಗೆ ಪಾತ್ರಗಳನ್ನೂ ನಿರ್ವಹಿಸುತ್ತಾರೆ.