ಸುಳ್ಯ: ಇನ್ನೂ ಶರಣಾಗದ ಪ್ರವೀಣ್ ನೆಟ್ಟಾರು ಹಂತಕರು: ಆಸ್ತಿ ಮುಟ್ಟುಗೋಲುಗೆ ನೀಡಿದ ಗಡುವು ಅಂತ್ಯ, ಎನ್ಐಎ ಮುಂದಿನ ನಡೆ ಕುತೂಹಲ
ಸುಳ್ಯ: ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಆರೋಪಿಗಳ ಶರಣಾಗತಿಗೆ ಸೂಚಿಸಿದ ಗಡುವು ಮುಗಿದಿದೆ. ಇದೀಗ ತನಿಖಾ ಸಂಸ್ಥೆಯ ಮುಂದಿನ ನಡೆಯ ಬಗ್ಗೆ ಎಲ್ಲರಿಗೂ ಕುತೂಹಲ ಗರಿಗೆದರಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪರಾರಿಯಾಗಿ ತಲೆತಪ್ಪಿಸಿಕೊಂಡ ಆರೋಪಿಗಳು ಜೂ.30ರೊಳಗೆ ಶರಣಾಗಬೇಕು. ಇಲ್ಲವೇ ಆರೋಪಿಗಳ ಮನೆ, ಆಸ್ತಿ ಜಪ್ತಿ ಮಾಡುವುದಾಗಿ ಎನ್ಐಎ ಖಡಕ್ ವಾರ್ನಿಂಗ್ ನೀಡಿತ್ತು. ಜತೆಗೆ ಧ್ವನಿವರ್ಧಕದ ಮೂಲಕ ಉದ್ಘೋಷಣೆ ಮಾಡಿದ್ದಲ್ಲದೆ, ಆರೋಪಿಗಳ ಮನೆಗಳಲ್ಲೂ ಪೋಸ್ಟರ್ ಹಚ್ಚುವ ಮೂಲಕ ಮಾಹಿತಿ ನೀಡಲಾಗಿತ್ತು. ಆದರೆ ಆರೋಪಿಗಳು ಇನ್ನೂ ಶರಣಾಗಿಲ್ಲ ಎಂಬ ವಿಚಾರ ತಿಳಿದುಬಂದಿದೆ.
ತಲೆಮರೆಸಿಕೊಂಡಿರುವ ಆರೋಪಿಗಳ ಆಸ್ತಿ, ಮನೆ ಮುಟ್ಟುಗೋಲು ಮಾಡಬಹುದು ಎನ್ನಲಾಗಿದ್ದರೂ ಇದಕ್ಕೂ ಸಮಯ ತಗಲುತ್ತದೆ. ಆರೋಪಿಯ ಹೆಸರಿನಲ್ಲಿರುವ ಚರಾಸ್ತಿ ಹಾಗೂ ಸ್ಥಿರಾಸ್ತಿಗಳ ಮಾಹಿತಿಯನ್ನು ಎನ್‌ಐಎ ಅಧಿಕಾರಿಗಳು ಕಂದಾಯ ಇಲಾಖೆ, ಬ್ಯಾಂಕ್‌ಗಳು ಮತ್ತಿತರ ಮೂಲಗಳಿಂದ ಸಂಗ್ರಹಿಸಿ, ಆರೋಪಿಗಳ ಹೆಸರಿನಲ್ಲಿರುವ ಆಸ್ತಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಬಳಿಕ ಆರೋಪಿಯದ್ದೇ ಆಸ್ತಿ ಎಂದು ದೃಢೀಕರಣಗೊಂಡಲ್ಲಿ ಮುಟ್ಟುಗೋಲು ಹಾಕಿಕೊಂಡು ಸರಕಾರದ ವಶಕ್ಕೆ ಪಡೆಯಯಬಹುದು ಎಂಬ ಮಾಹಿತಿ ಲಭ್ಯವಾಗಿದೆ.
ಇದೀಗ ಆರೋಪಿಗಳು ವಿದೇಶಕ್ಕೆ ಪರಾರಿಯಾಗಿರುವ ಶಂಕೆಯಿದ್ದು, ಆ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗಿನ ಅಬ್ದುಲ್ ನಾಸಿರ್, ಅಬ್ದುಲ್ ರೆಹಮಾನ್, ಬೆಳ್ತಂಗಡಿಯ ನೌಷಾದ್ ಹಾಗೂ ಐವರು ಸೇರಿದಂತೆ ಒಟ್ಟು 8 ಮಂದಿ ಶಂಕಿತ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ತುಫೈಲ್, ಮೊಹಮ್ಮದ್ ಮುಸ್ತಾಫ ಸುಳಿವಿಗೆ ತಲಾ 5 ಲಕ್ಷ ರೂ. ಹಾಗೂ ಉಮ್ಮರ್ ಫಾರೂಕ್, ಅಬೂಬಕ್ಕರ್ ಸಿದ್ದಿಕ್ ಸುಳಿವು ನೀಡಿದಲ್ಲಿ ತಲಾ 2 ಲಕ್ಷ ರೂ. ಎನ್ಐಎ ಬಹುಮಾನ ಘೋಷಿಸಿತ್ತು.