ಒಂದು ಪಂಚೆಯೊಳಗೆ ಬಿಜೆಪಿ ಬಂಧಿ: ಕೈ ಲೇವಡಿ- ಗಾಯಕ್ಕೆ ತುಪ್ಪ ಸುರಿದ ರೇಣುಕಾಚಾರ್ಯ
ಒಂದು ಪಂಚೆಯೊಳಗೆ ಬಿಜೆಪಿ ಬಂಧಿ: ಕೈ ಲೇವಡಿ- ಗಾಯಕ್ಕೆ ತುಪ್ಪ ಸುರಿದ ರೇಣುಕಾಚಾರ್ಯ
ಇಡೀ ಬಿಜೆಪಿ ಒಂದು ಪಂಚೆಯೊಳಗೆ ಬಂಧಿಯಾಗಿ ವಿಲವಿಲ ಒದ್ದಾಡುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ನಾಯಕರನ್ನು ಅಣಕಿಸಿದೆ. ಅಷ್ಟೇ ಅಲ್ಲ, ಆ ಪಂಚೆಯನ್ನು ಹರಿಯಲೇಬೇಕು ಎಂದು ಕುಹಕವಾಡಿದೆ.
ದುಡಿಯದೆ, ಬೆವರು ಹರಿಸದೆ, ತಿರುಗದೆ, ನಾಲ್ಕು ಮತವನ್ನು ಗಳಿಸುವ ಶಕ್ತಿಯೂ ಇಲ್ಲದ ಆ 'ಸಂಘ'ಟನಾ ಕಾರ್ಯದರ್ಶಿಯ ವಿರುದ್ಧ ಮಾತನಾಡಿದ ಒಬ್ಬೇ ಒಬ್ಬ ವ್ಯಕ್ತಿ ಎಂದರೆ ರೇಣುಕಾಚಾರ್ಯ ಎಂದು ನೇರವಾಗಿ ಕಾಂಗ್ರೆಸ್ ತನ್ನ ಟ್ವೀಟ್ ಮೂಲಕ ಕಮಲ ಪಾಳಯವನ್ನು ಚುಚ್ಚಿದೆ.
ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತು ಗೆಲ್ಲಲಾಗದ ದೊಣ್ಣೆ ನಾಯಕರೊಬ್ಬರು ಆರ್‌ಎಸ್‌ಎಸ್‌ನ ದೊಣ್ಣೆ ತೋರಿಸಿ ಇಡೀ ಬಿಜೆಪಿಯನ್ನು ಅಲ್ಲಾಡಿಸುತ್ತಿದ್ದಾರೆ. ಬಿ.ಎಲ್. ಸಂತೋಷ್ ಅವರೇ, ರೇಣುಕಾಚಾರ್ಯ ಅವರ ಈ ಮಾತನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಗ್ರಾಮ ಪಂಚಾಯಿತ್ ಚುನಾಔಣೆಗೆ ಸ್ಪರ್ಧಿಸಿ ಗೆದ್ದು ತೋರಿಸಿ! ನಿಮ್ಮ ದಮ್ಮು ತಾಕತ್ತು ನಿರೂಪಿಸಿ ಎಂದು ಕಾಂಗ್ರೆಸ್ ಸವಾಲು ಎಸೆದಿದೆ.
ಇದೇ ವೇಳೆ, ಬಿಜೆಪಿ ಸೋಲಿನ ಗಾಯಕ್ಕೆ ತುಪ್ಪ ಸುರಿದ ಬಿಜೆಪಿ ಮಾಜಿ ಸಚಿವ ರೇಣುಕಾಚಾರ್ಯ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ರಾಷ್ಟ್ರೀಯ ನಾಯಕ ಬಿ.ಎಸ್. ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ವಿರುದ್ಧ ನೋಟೀಸ್ ಜಾರಿಗೊಳಿಸಿರುವ ಕ್ರಮವನ್ನು ಖಂಡಿಸಿದ ಅವರು, ನಳಿನ್ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದರು. ಪಕ್ಷದ ವಿವಿಧ ನಾಯಕರು ಸೋಲಿನ ಪರಾಮರ್ಶೆ ಕುರಿತು ಬಹಿರಂಗ ಹೇಳಿಕೆ ನೀಡಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದು ದೊಡ್ಡ ಅಪರಾಧ ಎಂದು ಬೇಸರ ವ್ಯಕ್ತಪಡಿಸಿದರು.
ಜಗದೀಶ್ ಶೆಟ್ಟರ್ ವಿರುದ್ದ ಷಡ್ಯಂತ್ರ ರೂಪಿಸಿದ ಕೆಲ ಬಿಜೆಪಿ ನಾಯಕರು ಅವರನ್ನು ಮುಗಿಸಲು ಹೋಗಿ ಪಕ್ಷವನ್ನೇ ಬಲಿ ಕೊಟ್ಟರು ಎಂದು ಖೇದ ವ್ಯಕ್ತಪಡಿಸಿದರು.
ಈ ಮಧ್ಯೆ, ಬಿಜೆಪಿ ನಾಯಕರ ವಿರುದ್ಧದ ತಮ್ಮ ಹೇಳಿಕೆಯನ್ನು ಬಸನಗೌಡ ಯತ್ನಾಳ್ ಸಮರ್ಥಿಸಿಕೊಂಡಿದ್ದಾರೆ. ತಮ್ಮ ಹೇಳಿಕೆಯಲ್ಲಿ ಯಾವುದೇ ಅಂಶ ಪಕ್ಷದ ವಿರುದ್ಧ ಇಲ್ಲ. ನಾನು ಬಿಜೆಪಿ ವಿರುದ್ಧ ಕೆಲಸ ಮಾಡಿಲ್ಲ. ಬದಲಾಗಿ ನನ್ನನ್ನೇ ಸೋಲಿಸಲು ಪ್ರಯತ್ನಿಸಲಾಗಿದೆ ಎಂದು ಯತ್ನಾಳ್ ಹೇಳಿದ್ದಾರೆ.
ಈ ಬೆಳವಣಿಗೆ ಮಧ್ಯೆ, ಕಟೀಲ್, ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಬಸವರಾಜ ಬೊಮ್ಮಾಯಿ, ಸಿ.ಟಿ. ರವಿ ಅವರು ಪಕ್ಷದ ಕಚೇರಿಯಲ್ಲಿ ಸಭೆ ಸೇರಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಬಹಿರಂಗವಾಗಿ ಮಾತನಾಡಿದ್ದ 11 ಮಂದಿಗೆ ನೋಟೀಸ್ ನೀಡಿದರು. ಸಂಸದ ಪ್ರತಾಪ್ ಸಿಂಹ ಮತ್ತು ಯತ್ನಾಳ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರೆ, ರೇಣುಕಾಚಾರ್ಯ ಸಭೆಯಿಂದ ದೂರ ಉಳಿದರು. ಅವರ ಜೊತೆಗೆ ಮಾತನಾಡುವ ಹೊಣೆಯನ್ನು ಯಡಿಯೂರಪ್ಪ ಅವರಿಗೆ ವಹಿಸಲಾಯಿತು.
.