-->
ಮಂಗಳೂರು: ಖ್ಯಾತ ಚಿಂತಕ ಪ್ರೊ.ಪಟ್ಟಾಭಿರಾಮ ಸೋಮಯಾಜಿ ನಿಧನ

ಮಂಗಳೂರು: ಖ್ಯಾತ ಚಿಂತಕ ಪ್ರೊ.ಪಟ್ಟಾಭಿರಾಮ ಸೋಮಯಾಜಿ ನಿಧನ


ಮಂಗಳೂರು: ಖ್ಯಾತ ಚಿಂತಕ, ಮಂಗಳೂರು ವಿವಿ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ. ಪಟ್ಟಾಭಿರಾಮ ಸೋಮಯಾಜಿಯವರು ಇಂದು ಮುಂಜಾನೆ ನಿಧನರಾದರು.

ನಗರದ ದೇರೆಬೈಲು ಕೊಂಚಾಡಿ ಬಳಿಯಿರುವ ಗಿರಿನಗರದಲ್ಲಿ ಅವರು ಒಂಟಿಯಾಗಿ ವಾಸವಿದ್ದರು.  ಅವರು ಇಂದು ಬೆಳಗ್ಗೆ ಮನೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಹಂಪನಕಟ್ಟೆಯ ಮಂಗಳೂರು ವಿವಿ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ನಿವೃತ್ತರಾಗಿರುವ ಇವರು ಕೋಮುಸೌಹಾರ್ದ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು.

ಅನಾರೋಗ್ಯದಿಂದ‌ ಬಳಲುತ್ತಿದ್ದ ಪ್ರೊ.ಪಟ್ಟಾಭಿರಾಮ ಸೋಮಯಾಜಿಯವರು ಕೆಲದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಶುಕ್ರವಾರ ರಾತ್ರಿ ಕೆಲ ಆಪ್ತರೊಡನೆ ಫೋನ್ ಮೂಲಕ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಶನಿವಾರ ಬೆಳಗ್ಗೆ ಅವರು ಮನೆಯಿಂದ ಹೊರಬಾರದಿರುವುದನ್ನು ನೋಡಿದ  ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿ ಮನೆಬಾಗಿಲನ್ನು ಒಡೆದು ನೋಡಿದಾಗ ಅವರು ಮಲಗಿದಲ್ಲೇ ಕೊನೆಯುಸಿರೆಳೆದಿರುವುದು ತಿಳಿದುಬಂದಿದೆ. ಅವರು ವಿಚ್ಛೇದಿತರಾದ ಬಳಿಕ ಒಂಟಿಯಾಗಿ ವಾಸವಾಗಿದ್ದರು.

 ಖ್ಯಾತ ಚಿಂತಕರಾಗಿದ್ದ ಪಅವರು ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸುಮಾರು 2 ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಪಟ್ಟಾಭಿರಾಮ ಸೋಮಯಾಜಿ ಅವರು ಕೋಮು ಸೌಹಾರ್ದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, ಮಂಗಳೂರಿನಲ್ಲಿ ನಡೆದ ಪಬ್ ದಾಳಿಯ ನಂತರ ಅವರು ರಾಮಸೇನೆಯನ್ನು ‘ರಾವಣ ಸೇನೆ’ ಎಂದು ಕರೆದ ಹಿನ್ನೆಲೆಯಲ್ಲಿ ಅವರ ವಿರುದ್ದ ನಗರದಲ್ಲಿ ಪ್ರತಿಭಟನೆಗಳು ಕೂಡ ನಡೆದಿದ್ದವು. 2012 ರಲ್ಲಿ ಪಟ್ಟಾಭಿರಾಮ ಸೋಮಯಾಜಿ ವಿರುದ್ಧ  ದ್ವೇಷವನ್ನು ಹೊಂದಿದ್ದ ಭಜರಂಗ ದಳದ ಕಾರ್ಯಕರ್ತರೊಬ್ಬರು ಅವರು ಪತ್ರಿಕಾಗೋಷ್ಠಿ ಮುಗಿಸಿ ತೆರಳುವ ವೇಳೆ  ಅವರ ಮುಖದ ಮೇಲೆ ಹಸುವಿನ ಸೆಗಣಿಯನ್ನು ಬಳಿದಿದ್ದರು.



ಪಟ್ಟಾಭಿರಾಮ ಸೋಮಯಾಜಿ ಅವರಿಗೆ 64 ವರ್ಷ ವಯಸ್ಸಾಗಿದ್ದು, ಅವರು ಮಂಗಳೂರಿನಲ್ಲಿ ಕೋಮು ಸೌಹಾರ್ದ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು.

   ನಾಳೆ ( ಜು.2) ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುರಾಡಿ ನೀಲಾವರದಲ್ಲಿರುವ ಪಟ್ಟಾಭಿರಾಮ ಸೋಮಯಾಜಿ ಅವರ ಅಕ್ಕನ ಮನೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ‌.

Ads on article

Advertise in articles 1

advertising articles 2

Advertise under the article