ಕುಡುಕನಿಗೆ ಸಹಾಯ ಮಾಡಲು ಹೋಗಿ ಆತನೊಂದಿಗೆ ಪೊಲೀಸ್ ಕಾನ್ ಸ್ಟೇಬಲ್ ಕೂಡಾ ಬಲಿ
Thursday, July 6, 2023
ದೇಹತ್: ಪಾನಮತ್ತನಾಗಿ ಹೆದ್ದಾರಿ ಬದಿಯಲ್ಲಿ ಮಲಗಿದ್ದ ವ್ಯಕ್ತಿಗೆ ಸಹಾಯ ಮಾಡಲು ಹೋಗಿ ಪೊಲೀಸ್ ಕಾನ್‌ಸ್ಟೆಬಲ್ ಹಾಗೂ ಕುಡುಕ ಇಬ್ಬರೂ ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದ ಕಾನ್ಪುರ ಬಳಿಯ ದೇಹತ್ ಜಿಲ್ಲೆಯಲ್ಲಿ ನಡೆದಿದೆ.
ವಿವೇಕ ಕುಮಾರ್ ಹಾಗೂ ಕುಡುಕ ಇಬ್ಬರು ಘಟನೆಯಲ್ಲಿ ಪ್ರಾಣವನ್ನು ಕಳೆದುಕೊಂಡ ದುರ್ದೈವಿಗಳು. ಕುಡುಕನ ಗುರುತು ಇನ್ನೂ ಪತ್ತೆಯಾಗಿಲ್ಲ.
ಬುಧವಾರ ನಸುಕಿನ ವೇಳೆ ಅಕ್ಬರ್‌ಪುರ ಪ್ರದೇಶದ ಹೆದ್ದಾರಿಯಲ್ಲಿ ಕಾನ್ಪುರ ದೇಹತ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಶ್ ಕುಮಾರ್ ಪಾಂಡೆ, ಸಬ್ ಇನ್ಸ್‌ಪೆಕ್ಟರ್ ಮಥುರಾ ಪ್ರಸಾದ್, ಹೆಡ್ ಕಾನ್‌ಸ್ಟೆಬಲ್ ಅರವಿಂದ್ ಕುಮಾರ್, ಕಾನ್‌ಸ್ಟೆಬಲ್‌ಗಳಾದ ಸೌರಭ್ ಕುಮಾರ್ ಮತ್ತು ವಿವೇಕ್ ಕುಮಾರ್ ಗಸ್ತಿನಲ್ಲಿದ್ದರು. ಈ ವೇಳೆ ಮಾದಾಪುರ ಸೇತುವೆಯ ಬಳಿಯ ಹೆದ್ದಾರಿಯಲ್ಲಿ ಪಾಮಮತ್ತನಾಗಿ ವ್ಯಕ್ತಿ ಬಿದ್ದಿರುವುದನ್ನು ನೋಡಿದ್ದಾರೆ.
ಈ ವೇಳೆ ಆತನಿಗೆ ಸಹಾಯ ಮಾಡುವ ಉದ್ದೇಶದಿಂದ ಪೊಲೀಸರು ಆತನನ್ನು ಎತ್ತಿ ಅಲ್ಲಿಂದ ಬೇರೆಡೆಗೆ ಕೊಂಡೊಯ್ಯಲು ಯತ್ನಿಸಿದ್ದಾರೆ. ಆಗ ವೇಗವಾಗಿ ಬಂದ ಟೆಂಪೋ ರಾಜೇಶ್ ಕುಮಾರ್ ಪಾಂಡೆಗೆ ಢಿಕ್ಕಿ ಹೊಡೆದಿದೆ. ಕೂಡಲೇ ಉಳಿದವರು ದಿಕ್ಕಪಾಲಾಗಿ ಓಡಿದ್ದಾರೆ.
ಈ ವೇಳೆ ಕಾನ್‌ಸ್ಟೆಬಲ್ ವಿವೇಕ್ ಟೆಂಪೋ ಡಿಕ್ಕಿ ಹೊಡೆದ ರಭಸಕ್ಕೆ ಸೇತುವೆಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಇತರ ಪೊಲೀಸರಿಗೆ ಕೈ, ಕಾಲು ಮತ್ತು ಸೊಂಟದ ಮೇಲೆ ಗಂಭೀರ ಗಾಯಗಳಾಗಿದ್ದು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕುಡುಕ ಕೂಡಾ ಗಂಭಿರವಾಗಿ ಗಾಯಗೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಕಾನ್‌ಸ್ಟೆಬಲ್ ಸಾವಿನ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಈ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ.