![ಪುತ್ರನನ್ನು ಕಳೆದುಕೊಂಡು ರೋದಿಸುತ್ತಿದ್ದ ತಾಯಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್ ಸಿಬ್ಬಂದಿ ಪುತ್ರನನ್ನು ಕಳೆದುಕೊಂಡು ರೋದಿಸುತ್ತಿದ್ದ ತಾಯಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್ ಸಿಬ್ಬಂದಿ](https://blogger.googleusercontent.com/img/b/R29vZ2xl/AVvXsEi_7bcxuk4rwwGRU74iZ8Z1areI0karAce9lls3HujEzfsyPq-VDIlsAuGH57YO85hYVJdv7nG-92bBbg7r51YKgt6anF6MeKMSrPlPQ1jdvVSZve_6H5Xaifellgm4JL6fJjb-_AZP4alT/s1600/1688745197385810-0.png)
ಪುತ್ರನನ್ನು ಕಳೆದುಕೊಂಡು ರೋದಿಸುತ್ತಿದ್ದ ತಾಯಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್ ಸಿಬ್ಬಂದಿ
Friday, July 7, 2023
ಭೋಪಾಲ್: ಹಾವು ಕಡಿತಗೊಂಡು 9 ವರ್ಷದ ಪುತ್ರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಾಗ ಆತನ ಮೃತದೇಹವನ್ನು ಅಪ್ಪಿಕೊಂಡು ರೋದಿಸುತ್ತಿದ್ದ ತಾಯಿಗೆ ಪೊಲೀಸ್ ಸಿಬ್ಬಂದಿಯೊಬ್ಬನು ಕಪಾಳಮೋಕ್ಷಗೈದು ಅಮಾನುಷವಾಗಿ ವರ್ತಿಸಿರುವ ಘಟನೆ ಶಹದೋಲ್ ಜಿಲ್ಲೆಯ ಜೈತ್ಪುರ್ ಎಂಬಲ್ಲಿ ನಡೆದಿದೆ.
ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಹಸ್ತಾಂತರಿಸಲು ಆ ತಾಯಿ ನಿರಾಕರಿಸಿದ್ದಾಳೆ. ಈ ವೇಳೆ ಪೊಲೀಸ್ ಸಿಬ್ಬಂದಿ ಆಕೆಗೆ ಕಪಾಳಮೋಕ್ಷ ಮಾಡಿದ್ದಾನೆ. ಆರೋಪಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಹಾವು ಕಡಿತಕ್ಕೊಳಗಾದ ಬಾಲಕನನ್ನು ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನನ್ನು ಬದುಕುಳಿಸಲು ವೈದ್ಯರ ಸತತ ಪ್ರಯತ್ನಗಳ ಹೊರತಾಗಿಯೂ ಚಿಕಿತ್ಸೆ ಫಲಿಸದೆ ಆತ ಇಂದು ಮೃತಪಟ್ಟಿದ್ದ. ಪುತ್ರನನ್ನು ಕಳೆದುಕೊಂಡ ಆ ತಾಯಿ ಆಸ್ಪತ್ರೆಯ ಹೊರಗೆ ರೋದಿಸುತ್ತಿದ್ದಳು. ಈ ವೇಳೆ ಪೊಲೀಸ್ ಸಿಬ್ಬಂದಿ ಸಂತೋಷ್ ಸಿಂಗ್ ಪರಿಹಾರ್ ಅಲ್ಲಿಗೆ ಆಗಮಿಸಿ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಹಸ್ತಾಂತರಿಸುವಂತೆ ಕೇಳಿದ್ದಾನೆ. ಈ ವೇಳೆ ಆಕೆ ನಿರಾಕರಿಸಿದ್ದಾರೆ. ಇದರಿಂದ ಕುಪಿತಗೊಂಡ ಪೊಲೀಸ್ ಸಿಬ್ಬಂದಿ ಆಕೆಗೆ ಹೊಡೆದಿದ್ದ.
ಆರೋಪಿ ಪೊಲೀಸ್ ಸಿಬ್ಬಂದಿಯನ್ನು ತಕ್ಷಣ ಅಮಾನತುಗೊಳಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಎಎಸ್‌ಪಿ ಮುಕೇಶ್ ವೈದ್ಯ ಹೇಳಿದ್ದಾರೆ.