SCDCC ಬ್ಯಾಂಕ್ ನಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ
Friday, July 7, 2023
ಮಂಗಳೂರು: “ಸಹಕಾರಿ ಪಿತಾಮಹ" ಮೊಳಹಳ್ಳಿ ಶಿವರಾವ್ ಸ್ಮರಣಾರ್ಥ 2022-23ನೇ ಸಾಲಿನಲ್ಲಿ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹತ್ತನೇ ತರಗತಿ ಹಾಗೂ ಪದವಿಪೂರ್ವ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿ ಸಾಧನೆಗೈದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮತ್ತು
ಸಿಬ್ಬಂದಿಗಳ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ
ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮವು ಶುಕ್ರವಾರ ಸಂಜೆ ಬ್ಯಾಂಕ್ ಸಭಾಭವನದಲ್ಲಿ ಜರುಗಿತು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೆರವೇರಿಸಿ ಮಾತಾಡಿದ ಕಮಿಷನರ್ ಕುಲ್ ದೀಪ್ ಜೈನ್ ಅವರು, "ಮಕ್ಕಳಿಗೆ ಅವರ ಶೈಕ್ಷಣಿಕ ಸಾಧನೆಯ ಆಧಾರದಲ್ಲಿ ಪುರಸ್ಕಾರ ನೀಡುತ್ತಿರುವುದು ಹೆಮ್ಮೆಯ ವಿಚಾರ. ಈಗಿನ ಮಕ್ಕಳು ಪಡೆಯುತ್ತಿರುವ ಮಾರ್ಕ್ಸ್ ನೋಡಿ ತುಂಬಾ ಖುಷಿಯಾಯಿತು. ನಾನು ಚೆನ್ನೈಯಲ್ಲಿ ಓದಿದ್ದು ಇಡೀ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದಿದ್ದೆ. ನಂತರ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸವನ್ನೂ ಮಾಡಿದ್ದೆ. ವಿದ್ಯಾರ್ಥಿ ಜೀವನದಲ್ಲಿ ಕಣ್ಣು ಕಿವಿಯನ್ನು ತೆರೆದಿಟ್ಟುಕೊಳ್ಳಬೇಕು, ಎಲ್ಲವನ್ನು ಕೇಳಿ ತಿಳಿದುಕೊಳ್ಳುವ ಉತ್ಸಾಹ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಮಾಜದಲ್ಲಿ ಸಿಗುವ ಪ್ರೋತ್ಸಾಹವನ್ನು ಚೆನ್ನಾಗಿ ಬಳಸಿಕೊಂಡಲ್ಲಿ ಖಂಡಿತ ಯಶಸ್ಸು ಸಾಧ್ಯ" ಎಂದರು.
ಬಳಿಕ ಮಾತಾಡಿದ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರು, "ಮಕ್ಕಳಿಗೆ ಇಲ್ಲಿ ಸಿಕ್ಕ ಪುರಸ್ಕಾರ ಇತರರಿಗೂ ಪ್ರೇರಣೆಯಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ಚೆನ್ನಾಗಿ ಕಲಿತು ಯಶಸ್ಸು ಸಾಧಿಸಬೇಕು. ವಿದ್ಯೆಗೆ ಹೆಚ್ಚಿನ ಮಹತ್ವ ನೀಡುವ ಉದ್ದೇಶದಿಂದ ಕಳೆದ 15 ವರ್ಷಗಳಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂಬ ದೃಷ್ಟಿಯಲ್ಲಿ ನವೋದಯ ಗುಂಪುಗಳನ್ನು ಪ್ರಾರಂಭಿಸಲಾಗಿದೆ. ಈ ಗುಂಪುಗಳಿಂದ ಮಹಿಳೆಯರು ಸ್ವಾವಲಂಬಿಗಳಾಗಿ ಮಕ್ಕಳ ಉನ್ನತ ಶಿಕ್ಷಣದತ್ತ ಗಮನ ಕೊಡುವಂತಾಗಿದೆ" ಎಂದರು.
ವೇದಿಕೆಯಲ್ಲಿ ಮಂಗಳೂರು ಕಮಿಷನರ್ ಕುಲ್ ದೀಪ್ ಜೈನ್, ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್, ಭಾಸ್ಕರ್ ಕೋಟ್ಯಾನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ., ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಬಿ. ನಿರಂಜನ್, ಟಿ.ಜಿ.ರಾಜಾರಾಮ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಎಂ.ವಾದಿರಾಜ ಶೆಟ್ಟಿ,
ಎಸ್.ರಾಜು ಪೂಜಾರಿ, ಶಶಿಕುಮಾರ್ ರೈ ಬಿ., ಎಸ್. ಬಿ. ಜಯರಾಮ ರೈ, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಮೋನಪ್ಪ ಶೆಟ್ಟಿ
ಎಕ್ಕಾರು, ಕೆ. ಹರಿಶ್ಚಂದ್ರ, ಎಂ.ಮಹೇಶ್ ಹೆಗ್ಡೆ, ಕೆ. ಜೈರಾಜ್ ಬಿ. ರೈ, ಬಿ.ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್, ಸದಾಶಿವ ಉಳ್ಳಾಲ್,
ರಮೇಶ್ ಹೆಚ್.ಎನ್. ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ತನುಶ್ರೀ ಪಿತ್ರೋಡಿ ಅವರು ಯೋಗ ಪ್ರದರ್ಶನವನ್ನು ನೀಡಿದರು.
ರಾಜಾರಾಮ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ನವೋದಯ ಸ್ವಸಹಾಯ ಗುಂಪುಗಳ ಸಾಧನೆಯ ಯಶೋಗಾಥೆ ಕುರಿತ "ಸಮೃದ್ಧಿ" ಸ್ಮರಣ ಸಂಚಿಕೆಯನ್ನು ಅತಿಥಿಗಳು ಲೋಕಾರ್ಪಣೆಗೊಳಿಸಿದರು.