ಪ್ರಿಯಕರನ ಅರಸಿ ಪಾಕ್ ನಿಂದ ಇಂಡಿಯಾಕ್ಕೆ ಬಂದ ನಾಲ್ಕು ಮಕ್ಕಳ ತಾಯಿಗೆ ಹೊಸಬಾಳು: ನಾನಿನ್ನು ಹಿಂದೂ, ಭಾರತೀಯಳಾಗಿ ಬದುಕುತ್ತೇನೆಂದ ಸೀಮಾ
Sunday, July 9, 2023
ನೋಯ್ಡಾ: ಪ್ರೀತಿಸಿದಾತನಿಗಾಗಿ ಪಾಕಿಸ್ತಾನ ತೊರೆದು ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದು ಬಂಧನಕ್ಕೊಳಗಾಗಿದ್ದ ಪಾಕಿಸ್ತಾನಿ ಮಹಿಳೆ ಸೀಮಾಗೆ ಜಾಮೀನು ದೊರಕಿದ್ದು, ಪ್ರಿಯಕರ ಸಚಿನ್ ಮೀನಾನೊಂದಿಗೆ ಹೊಸ ಜೀವನ ಆರಂಭಿಸಲು ಉತ್ಸುಕರಾಗಿದ್ದಾರೆ.
ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸೀಮಾ, ನನ್ನ ಪತಿ ಹಿಂದೂ, ಆದ್ದರಿಂದ ನಾನೂ ಈಗ ಹಿಂದೂವಾಗಿದ್ದೇನೆ. ಅಕ್ಲದೆ ನಾನೀಗ ಭಾರತೀಯಳೆಂಬ ಭಾವನೆ ಮೂಡುತ್ತಿದೆ. ಸಚಿನ್ ಅವರನ್ನು ಮೊದಲು ಭೇಟಿಯಾಗುವ ಪ್ರಯಾಣ ಬಹಳ ಕಷ್ಟಕರವಾಗಿತ್ತು. ಆಗ ನಾನು ಬಹಳ ಹೆದರಿದ್ದೆ. ಮೊದಲು ಕರಾಚಿಯಿಂದ ದುಬೈಗೆ ತೆರಳಿ 11 ಗಂಟೆಗಳ ಬಳಿಕ ನೇಪಾಳಕ್ಕೆ ಬಂದು, ಅಲ್ಲಿಂದ ಪೊಖರಾಗೆ ತಲುಪಿ ಸಚಿನ್ ಅವರನ್ನು ಸೇರಿಕೊಂಡಿದ್ದೆ ಎಂದಿದ್ದಾರೆ.
ತಿಂಗಳ ಕಾಲ ನಾನು ಜೈಲಿನಲ್ಲಿಯೇ ಇರುತ್ತೇನೆಂದು ಭಾವಿಸಿದ್ದೆ. ಆದರೆ ಜಾಮೀನು ಸಿಕ್ಕಿದ್ದನ್ನು ಕೇಳಿ ಸಂತೋಷದಿಂದ ಕಿರುಚಿದೆ ಎಂದು ಸೀಮಾ ಖುಷಿ ಹಂಚಿಕೊಂಡಿದ್ದಾರೆ.
ಕೊರೊನಾ ಲಾಕ್‌ಡೌನ್ ವೇಳೆ ಪಬ್‌ಜಿ ಆನ್‌ಲೈನ್ ಗೇಮ್ ಆಡುತ್ತಿದ್ದ ಸಂದರ್ಭ ಇವರಿಬ್ಬರಿಗೆ ಪರಿಚಯವಾಗಿತ್ತು. ಈ ಪರಿಚಯವೇ 30 ವರ್ಷದ ಸೀಮಾ ಮತ್ತು 25 ವರ್ಷದ ಸಚಿನ್ ನಡುವೆ ಪ್ರೀತಿ ಚಿಗುರಿತ್ತು. 2022ರ ಮಾರ್ಚ್ ತಿಂಗಳಲ್ಲಿ ಇವರು ಮೊದಲ ಭೇಟಿಯಲ್ಲೇ ಮದುವೆಯೂ ಆಗಿದ್ದರು.
ರಹಸ್ಯ ವಿವಾಹದ ಬಳಿಕ ಸೀಮಾ ಪಾಕಿಸ್ತಾನಕ್ಕೆ ತೆರಳಿದ್ದು, ಸಚಿನ್ ನೇಪಾಳ ಗಡಿಯಿಂದ ನೋಯ್ಡಾಕ್ಕೆ ವಾಪಸ್ಸಾಗಿದ್ದರು. ದುಬೈನಲ್ಲಿದ್ದ ಪತಿಯೊಂದಿಗೆ ವೈಮನಸ್ಸು ಹೊಂದಿದ್ದ ಸೀಮಾ, 12 ಲಕ್ಷಕ್ಕೆ ತನ್ನ ನಿವೇಶನವನ್ನು ಮಾರಿ ತನಗೆ ಮತ್ತು ನಾಲ್ಕು ಮಕ್ಕಳಿಗೆ ನೇಪಾಳಕ್ಕೆ ವಿಮಾನದ ಟಿಕೆಟ್ ಮತ್ತು ವೀಸಾವನ್ನು ಪಡೆದಿದ್ದರು.
ಆದರೆ, ಕಠಂಡುವಿನಿಂದ ದೆಹಲಿಗೆ ಬಂದಿದ್ದ ಸೀಮಾ ಹಾಗೂ ಮಕ್ಕಳಿಗೆ ನೋಯ್ಡಾದಲ್ಲಿ ಉಳಿದುಕೊಳ್ಳಲು ಸಚಿನ್ ವ್ಯವಸ್ಥೆ ಮಾಡಿದ್ದ, ಆದರೆ ಜುಲೈ 4 ರಂದು ಮದುವೆ ರಿಜಿಸ್ಟರ್ ಮಾಡಲು ಹೋಗಿ ಅಕ್ರಮವಾಗಿ ಭಾರತ ಪ್ರವೇಶಿಸಿದ್ದು ಹೊರಜಗತ್ತಿಗೆ ತಿಳಿಯುತ್ತಲೇ ಸೀಮಾ ಅವರನ್ನು ಪೊಲೀಸರು ಬಂಧಿಸಿದ್ದರು. ವಲಸಿಗರಿಗೆ ಅಕ್ರಮವಾಗಿ ವಸತಿ ನೀಡಿದ್ದಕ್ಕೆ ಸಚಿನ್ ಅವರ ಮೇಲೂ ಪ್ರಕರಣ ದಾಖಲಿಸಿದ್ದರು. ಇದೀಗ ಸೀಮಾ ಅವರಿಗೆ ಕೋರ್ಟ್ ಜಾಮೀನು ನೀಡಿದೆ.
ಅತ್ತ ಸೀಮಾ ಅವರ ಪತಿ ಗುಲ್ಲಾಮ್ ಹೈದರ್, ಹೆಂಡತಿಯನ್ನು ಸೇರಲು ಸಹಾಯ ಮಾಡುವಂತೆ ಭಾರತ ಸರ್ಕಾರಕ್ಕೆ ವಿಡಿಯೊ ಮೂಲಕ ಮನವಿ ಮಾಡಿದ್ದಾರೆ. ಆದರೆ ಸೀಮಾ, ವಾಪಸ್ ಗುಲ್ಲಾಮ್ ಹೈದರ್ ಬಳಿ ಹೋಗುವುದಿಲ್ಲ, ಮತ್ತೆ ಪಾಕಿಸ್ತಾನಕ್ಕೆ ಹೋದರೆ ಜೀವಕ್ಕೆ ಅಪಾಯವಿದೆ ಎಂದಿದ್ದಾರೆ